ಬಂಟ್ವಾಳ: ಇಲ್ಲಿನ ಬಡಗ ಕಜೆಕಾರು ಗ್ರಾಮದ ಪಾಂಡವರಕಲ್ಲು ವಿದ್ಯಾನಗರ ಕುತ್ತಾಡಿ ಎಂಬಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಎ.25ರಂದು ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಕೃಷ್ಣಪ್ಪ ಪೂಜಾರಿ ಇವರ ಪುತ್ರ ಲೋಕೇಶ್ (೩೫) ಎಂದು ಗುರುತಿಸಲಾಗಿದೆ.
ಕೂಲಿ ಕಾರ್ಮಿಕರಾಗಿರುವ ಇವರು ಸೋಮವಾರ ರಜೆ ಮಾಡಿ ಮನೆಯಲ್ಲಿದ್ದರು. ಮಧ್ಯಾಹ್ನ ಸುಮಾರು ೩ ಗಂಟೆಗೆ ಮನೆಯಲ್ಲಿ ಮಲಗಿದ್ದ ವೇಳೆ ಸಿಡಿಲಿನ ಆಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಹೇಮಲತಾ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೃತರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.
