ಕೈಕಂಬ : ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಮಕ್ಕಳ ಅಭಿಮತಕ್ಕೂ ಬೆಲೆ ಕೊಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹಳಷ್ಟಿದ್ದು, ಅದಕ್ಕೆ ಪೂರಕವೆಂಬಂತೆ ಮಕ್ಕಳಲ್ಲಿ ಸದಭಿರುಚಿಯ ಕೌಶಲ್ಯಾಭಿವೃದ್ಧಿಗೆ ಸಹಕರಿಸಬೇಕು. ಆಗ ಮಾತ್ರ ಮಕ್ಕಳಲ್ಲಿ ಧನಾತ್ಮಕ ಪ್ರತಿಭೆ ಕಾಣಲು ಸಾಧ್ಯವಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪೆರ್ಮಂಕಿಯ ಖಾಸಗಿ ಗಾರ್ಡನ್‌ನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ‘ಕಣ್ಣಾಮುಚ್ಚೆ ಅದರಾಚೆ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ಮಕ್ಕಳ ಸಂಸತ್ತು’ ಉದ್ದೇಶಿಸಿ ಶಾಸಕರು ಮಾತನಾಡಿ, ಶಿಬಿರದಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಮಾಹಿತಿ ಸಿಗುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೊಸ ಯೋಚನೆ ಹುಟ್ಟುಹಾಕಲು ಇಂತಹ ಶಿಬಿರಗಳು ಮಹತ್ವದ್ದಾಗಿವೆ ಎಂದರು.

ಎ.೧೪ರಂದು ಗುರುವಾರ ನಡೆದ ‘ಮಕ್ಕಳ ಸಂಸತ್ತಿ’ನಲ್ಲಿ ಶಿಬಿರಾರ್ಥಿ ಮಕ್ಕಳು ಹೊಸ ಶಿಕ್ಷಣ ನೀತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಏನು ಲಾಭವಿದೆ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿ ಶಾಸಕ ಡಾ. ಶೆಟ್ಟಿ, ಕಾಲಕಾಲಕ್ಕೆ ಶಿಕ್ಷಣ ನೀತಿ ಪರಿಷ್ಕರಣೆಯಾಗಬೇಕಿತ್ತು. ಆದರೆ ಈ ದೇಶದಲ್ಲಿ ಅದೆಷ್ಟೋ ವರ್ಷಗಳ ಬಳಿಕ ಶಿಕ್ಷಣ ನೀತಿಯಲ್ಲಿ ಹೊಸತನ ಕಾಣುತ್ತಿದ್ದೇವೆ. ಇದು ಶಿಕ್ಷಣದಲ್ಲಿ ಹೊಸ ಶಕೆಯಾಗಿದೆ. ಇಲ್ಲಿಂದಲೇ ಪ್ರಸಕ್ತ ಹಾಗೂ ಮುಂದಿನ ಪೀಳಿಗೆಗೆ ಹೊಸ ಶಿಕ್ಷಣದ ಲಾಭವಾಗಲಿದೆ ಎಂದರು.

ಸಂಸತ್ತಿನಲ್ಲಿ ಭಾಗವಹಿಸಿದ್ದ ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳು ರೈತರ ಸಮಸ್ಯೆ, ಸಾರಿಗೆ ಸಮಸ್ಯೆ, ಶಿಕ್ಷಣ ತೆರಿಗೆ ಬಗ್ಗೆ ಗಮನಸೆಳೆಯುವ ಪ್ರಶ್ನೆ ಕೇಳಿದರು. ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿ, ನಿರೂಪಿಸಿದರು. ರಾಜ್ಯದಲ್ಲೇ ಪ್ರಪ್ರಥಮ ಶಿಬಿರ ನಡೆಸಿಕೊಟ್ಟ ಉಳಾಯಿಬೆಟ್ಟು ದಕಜಿಪಂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಚೇತನ್ ಕೊಪ್ಪ ಹಾಗೂ ಅವರ ಪತ್ನಿ ಅಕ್ಷತಾ ಕುಡ್ಲ ಅವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ, ಶಿಬಿರ ಸಹಾಯಕ ರೂಪೇಶ್, ಪಂಚಾಯತ್ ಸಿಬ್ಬಂದಿ ವರ್ಗ, ಶಿಬಿರಾರ್ಥಿಗಳು, ಮಕ್ಕಳ ಪೋಷಕರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಮಕ್ಕಳಿಂದ ನೃತ್ಯ, ನಾಟಕ, ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಶಿಬಿರಾರ್ಥಿಗಳಿಗೆ ಅಧ್ಯಕ್ಷ ಹರಿಕೇಶ್ ಶೆಟ್ಟಿ ಪ್ರಮಾಣಪತ್ರ ವಿತರಿಸಿದರು.

By Suddi9

Leave a Reply

Your email address will not be published. Required fields are marked *