ಕೈಕಂಬ : ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವಲ್ಲಿ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ರೀತಿಯ ರಾಜತಾಂತ್ರಿಕ ಕೆಲಸ ಮಾಡಿದೆ ಎಂಬುದಕ್ಕೆ ನಾನಿಂದು ಮನೆ ಸೇರಿರುವುದೇ ಸಾಕ್ಷಿಯಾಗಿದೆ ಎಂದು ಉಕ್ರೇನ್‌ನಿಂದ ಮಂಗಳೂರು ತಾಲೂಕಿನ ಗುರುಪುರ ಪಂಚಾಯತ್ ವ್ಯಾಪ್ತಿಯ ವಿಕಾಸನಗರದ ಲಾಯ್ಡ್ ಆಂಟನಿ ಪಿರೇರ ತಿಳಿಸಿದರು.gur-mar-8-loyd a perera-1

ವಿಕಾಸನಗರದ ಮನೆಯಲ್ಲಿ ಮಾಧ್ಯಮ ಪ್ರತಿನಿಧಯೊಂದಿಗೆ ಲಾಯ್ಡ್ ಪಿರೇರ ಮಾತನಾಡುತ್ತ, ‘ಫೆಬ್ರವರಿ ೨೪ರ ಬಳಿಕ ಉಕ್ರೇನ್ ಸ್ಥಿತಿ ಗಂಭೀರವಾಗಿದ್ದು, ಮಾರ್ಚ್ ಒಂದರಂದು ಉಕ್ರೇನ್‌ನ ಮಿಕೋಲೈವ್ ಪೆಟ್ರೋಮೊಹಿಲಾ ಬ್ಲ್ಯಾಕ್ ಸೀ ನ್ಯಾಶನಲ್ ಯೂನಿವರ್ಸಿಟಿಯಿಂದ ೪ ಬಸ್‌ಗಳಲ್ಲಿ ಮಲ್ಡೋವಾ ಪ್ರಯಾಣಿಸಿದೆವು. ಆಗ ಒಟ್ಟು ೩೦೦(೨೯೦ ಎಂಬಿಬಿಎಸ್ ಮತ್ತು ೧೦ ಇಂಜಿನಿಯರ್) ವಿದ್ಯಾರ್ಥಿಗಳಿದ್ದರು. ದಾರಿಮಧ್ಯೆ, ದೂರದಲ್ಲಿ ಭಯಾನಕ ಶೆಲ್‌ಗಳು ಉದುರುತ್ತಿದ್ದರೆ, ಅಲ್ಲಲ್ಲಿ ವೈಮಾನಿಕ ದಾಳಿ ಕಂಡು ಬರುತ್ತಿದ್ದವು. ದೂರದಲ್ಲಿ ಬೆಂಕಿಯುಂಡೆಗಳು ಕಾಣುತ್ತಿದ್ದವು. ಪರಿಣಾಮ, ನಾವಿದ್ದ ಬಸ್ ೪ ಗಂಟೆ ಒಂದೆಡೆ ಸ್ಥಗಿತಗೊಂಡು, ೧೮ ಗಂಟೆಗಳ ಪ್ರಯಾಣದ ಬಳಿಕ ಮಾಲ್ಡೋವಾ ತಲುಪಿತು. ಅಲ್ಲಿಂದ ೧೬ ಗಂಟೆ ಮುಂದಕ್ಕೆ ಪ್ರಯಾಣಿಸಿ ರೊಮೇನಿಯಾ ತಲುಪಿದೆವು” ಎಂದರು.

ಎಲ್ಲವೂ ಭಯಾನಕ, ಎಷ್ಟೇ ಧ್ಯೆರ್ಯ ಮಾಡಿಕೊಂಡರೂ, ಕ್ಷಣಕ್ಷಣಕ್ಕೂ ಧೈರ್ಯಗೆಡುವಂತಹ ಸ್ಥಿತಿ ಕಣ್ಣೆದುರು ಸೃಷ್ಟಿಯಾಗುತ್ತಿತ್ತು. ರೊಮೇನಿಯಾ ತಲುಪಿದ ಮೇಲೆ ಎಲ್ಲವೂ ನಿಟ್ಟುಸಿರು ಬಿಡುವಂತಿತ್ತು. ಅಲ್ಲಿ ಭಾರತ ಸರ್ಕಾರ ನಮಗಾಗಿ ಸಕಲ ವ್ಯವಸ್ಥೆ ಮಾಡಿತ್ತು. ಮಾ. ೬ರಂದು ರೊಮೇನಿಯಾದ ರಾಜಧಾನಿ ಬುಕಾರಿಸ್ಟ್ನಿಂದ ದೆಹಲಿಗೆ, ಅಲ್ಲಿಂದ ಮಾ. ೭ರಂದು ಬೆಂಗಳೂರು ಆಗಿ(೧೮ ಮಂದಿ ಬೆಂಗಳೂರಿನಲ್ಲಿ ಇಳಿದಿದ್ದಾರೆ) ಮಂಗಳೂರಿಗೆ ಆಗಮಿಸಿದ್ದೇವೆ. ನನ್ನನೊಂದಿಗೆ ಎಂಬಿಬಿಎಸ್ ಬ್ಯಾಚ್‌ಮೇಟ್ ಮಂಗಳೂರಿನ ಬಿಜೈಯ ಸಾಕ್ಷ್ಯಿ ಎಸ್ ಇದ್ದರು ಎಂದು ಲಾಯ್ಡ್ ವಿವರಿಸಿದರು.

ಉಕ್ರೇನ್‌ನಲ್ಲಿ ಭಾರತದಷ್ಟೇ ಉತ್ತಮವಾದ, ಯೂರೋಪಿಯನ್ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಸಿಗುತ್ತಿದೆ. ಅಲ್ಲಿ ಭಾರತದಷ್ಟು ವೈದ್ಯಕೀಯ ಶಿಕ್ಷಣ ದುಬಾರಿಯಲ್ಲ. ಐದೂವರೆ ವರ್ಷದ ಎಂಬಿಬಿಎಸ್ ಪದವಿ ಗಳಿಸಲು ಉಕ್ರೇನ್‌ನಲ್ಲಿ ಸುಮಾರು ೪೦ ಲಕ್ಷ ರೂ ಬೇಕಿದ್ದರೆ, ಭಾರತದಲ್ಲಿ ಇದೇ ಅವಧಿಗೆ ೭೫ ಲಕ್ಷರಿಂದ ಒಂದು ಕೋಟಿ ರೂ ಮೇಲ್ಪಟ್ಟು ಖರ್ಚಾಗುತ್ತದೆ.ಪಶ್ಚಿಮ ಉಕ್ರೇನ್‌ನಲ್ಲಿ ಭಾರತೀಯರೆಲ್ಲರು ಈಗಾಗಲೇ ಯಶಸ್ವಿಯಾಗಿ ತೆರವುಗೊಂಡಿದ್ದರೆ, ಪೂರ್ವ ಉಕ್ರೇನ್‌ನಲ್ಲಿ ಇನ್ನೂ ನೂರಾರು ಭಾರತೀಯರು ಉಳಿದುಕೊಂಡಿದ್ದಾರೆ. ಅವರನ್ನೂ ಭಾರತಕ್ಕೆ ಕರೆತರುವ ಕೆಲಸವಾಗಬೇಕು. ಯಾಕೆಂದರೆ, ರಷ್ಯಾವು ಉಕ್ರೇನ್ ಮೇಲಿನ ಯುದ್ಧ ಸ್ಥಗಿತಗೊಳಿಸುವ ಯಾವುದೇ ಲಕ್ಷಣಗಳಿಲ್ಲ ಎಂದರು.

”ನಮ್ಮ ಮಗನ ಸಹಿತ ಇತರ ಭಾರತೀಯರನ್ನು ಕರೆತರುವಲ್ಲಿ ನಿರಂತರ ಕೆಲಸ ಮಾಡಿರುವ ಭಾರತ ಸರ್ಕಾರ, ಸ್ಥಳೀಯ ಆಡಳಿತಗಳು ಮತ್ತು ಇಲ್ಲಿನ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಯುದ್ಧ ನಿಂತರೂ, ಅಲ್ಲಿನ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮನೆಮಠಗಳು ಧ್ವಂಸವಾಗಿರುವುದರಿಂದ ಮತ್ತೆ ಆ ರಾಷ್ಟ್ರ ಎದ್ದು ನಿಲ್ಲಬೇಕಿದ್ದರೆ ವರ್ಷಗಳೇ ಬೇಕಾದೀತು. ಪರಿಣಾಮ, ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದ್ದು, ಅವರಿಗೆ ಭಾರತದಲ್ಲಿ ಶಿಕ್ಷಣ ಮುಂದುವರಿಸಲು ವಿಶೇಷ ವ್ಯವಸ್ಥೆ ಮಾಡುವುದು ಉತ್ತಮ” ಎಂದು ಲಾಯ್ಡ್ ತಂದೆ ವಿಲಿಯಂ ಹಾಗೂ ತಾಯಿ ಪ್ರೇಮಲತಾ ಪಿರೇರ ಭಾರತ(ಕರ್ನಾಟಕ) ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಲಿಯಂ ಅವರು ಬಸ್ ಚಾಲಕರಾಗಿದ್ದರೆ, ಅವರ ಪತ್ನಿ ಪ್ರೇಮಲತಾ ಮೂಡುಶೆಡ್ಡೆಯ ಕ್ಷಯರೋಗ ಆಸ್ಪತ್ರೆಯಲ್ಲಿ ಹಿರಿಯ ದಾದಿಯಾಗಿದ್ದು, ೨೦೨೦-೨೦೨೧ರಲ್ಲಿ `ಬೆಸ್ಟ್ ನರ್ಸ್’ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *