ಸಿದ್ಧಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋಟರಿ ಕ್ಲಬ್ ೧೫ ಕಂಪ್ಯೂಟರ್ ಕೊಡುಗೆ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.10ರಂದು ಸೋಮವಾರ ನಡೆದ ಉಚಿತ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಮತ್ತಿತರರು ಇದ್ದರು
ಪ್ರಸಕ್ತ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಂಪ್ಯೂಟರ್ ನಮ್ಮ ಜೀವನ ಅವಿಭಾಜ್ಯ ಅಂಗವಾಗಿದ್ದು, ಜಗತ್ತಿನ ಪ್ರತಿಭೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತಂತ್ರಜ್ಞಾನ ಅತೀ ಅಗತ್ಯವಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮತ್ತು ಸರ್ಕಾರದ ಕಾಗ್ನಿಜೆಂಟ್ ವತಿಯಿಂದ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ೧೫ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಭವಿಷ್ಯ ಗರಿಷ್ಟ ಸಂಖ್ಯೆ ಹೊಂದಿರುವ ಯುವ ಜನರ ಕೈಯಲ್ಲಿ ಇದೆ. ಇದೀಗ ದೇಶಕ್ಕೆ ಉತ್ತಮ ನಾಯಕತ್ವ ದೊರೆತು ಜಗತ್ತಿನ ಎದುರು ಸದೃಢ ಭಾರತ ಎದ್ದು ನಿಂತಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಪ್ರಾಸ್ತವಿಕ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಲವು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ ಎಂದರು. ಮುಂದಿನ ದಿನಗಳಲ್ಲಿ ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಸಹಕಾರದಲ್ಲಿ ಒಟ್ಟು ೧೨೫ ಕಂಪ್ಯೂಟರ್ ವಿತರಿಸಲು ಚಿಂತನೆ ನಡೆಸಿದ ಎಂದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು, ರೋಟರಿ ವಲಯ ಲೆಪ್ಟಿನೆಂಟ್ ಅವಿಲ್ ಮಿನೇಜಸ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ಪ್ರಮುಖರಾದ ಸುರೇಶ್ ಕುಲಾಲ್, ದಾಮೋದರ ಪೂಜಾರಿ, ಸೀತಾರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಎಚ್ಕೆ ಸ್ವಾಗತಿಸಿ, ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ರಮೇಶ್ ನಾಯ್ಕ್ ರಾಯಿ ವಂದಿಸಿದರು.