ಮೂಡುಬಿದಿರೆ: ಇಲ್ಲಿನ ಬೆಳುವಾಯಿಯ ಶ್ರೀ ಯಕ್ಷ ದೇವ ಮಿತ್ರಕಲಾ ಮಂಡಳಿ (ರಿ) ವತಿಯಿಂದ 17 ನೇ ವರ್ಷದ ಯಕ್ಷ ಕಲೋತ್ಸವ 2014 ಪದ್ಮಾವತಿ ಕಲಾ ಮಂದಿರದಲ್ಲಿ ನ6ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ದೇವಾನಂದ ಭಟ್ ಹೇಳಿದ್ದಾರೆ. ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳ ಗಂಗೋತ್ರಿ ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಉದ್ಯಾವರ ಮಾಧವ ಆಚಾರ್ಯ ಅವರಿ ಯಕ್ಷ ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದರು.

ಅಂದು ಸಂಜೆ ಹಿರಿಯ ಕಿರಿಯ ಭಾಗವತರಿಂದ ಗಾನ ವೈವಿಧ್ಯ, ನ7ರಂದು ಅಪರಾಹ್ನ ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ, ಬಳಿಕ ತೆಂಕು ಬಡಗು ಹಾಸ್ಯ ಲೋಕದ ವೈವಿಧ್ಯ, ನ8ರ ಅಪರಾಹ್ನ ತಾಳಮದ್ದಳೆ ಎಂಬ ಹಾಸ್ಯಮಯ ನಾಟಕ, ಸಂಜೆ ಬಡಗು ತೆಂಕು ತಿಟ್ಟಿನ ಬಣ್ಣದ ಲೋಕ ಮತ್ತು ಸ್ತ್ರೀ ಪಾತ್ರ ನಾಟ್ಯ ವೈವಿಧ್ಯ, ನ9ರ ಅಪರಾಹ್ನ ಯಕ್ಷದೇವ ಮಿತ್ರಕಲಾ ಮಕ್ಕಳ ಮೇಳದಿಂದ ಮಹಿಷವಧೆ ಬಯಲಾಟ, ಬಳಿಕ ಸಮಾರೋಪ ಸಮಾರಂಭ , ಹರಿನಾರಾಯಣ ಬೈಪಡಿತ್ತಾಯರಿಗೆ ಶ್ರೀ ಯಕ್ಷದೇವ ಪ್ರಶಸ್ತಿಪ್ರದಾನ ನಡೆಯಲಿದೆ. ಬಳಿಕ ತೆಂಕು ಬಡಗಿನ ಕೂಡಾಟ ಭಕ್ತ ಸುಧನ್ವ ನಡೆಯಲಿದೆ.
ಸಂಸ್ಥೆಯ ರವಿಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
