ಕೋಣಾಜೆ :ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ೨೦೨೧ರಿಂದ ಆರಂಭಗೊಂಡ ‘ನಾರಾಯಣ ಗುರು ಸಂಶೋಧನಾ ಪ್ರಶಸ್ತಿ’ಗೆ ಉಪನ್ಯಾಸಕ, ಸಂಶೋಧಕ, ತುಳು ಕನ್ನಡ ವಾಗ್ಮಿ ಡಾ. ಅರುಣ್ ಉಳ್ಳಾಲ್ ಇವರು ಆಯ್ಕೆಯಾಗಿದ್ದಾರೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ‘ಭಗವತಿ ಆರಾಧನೆ-ಸಾಂಸ್ಕೃತಿಕ ಅಧ್ಯಯನ’ ವಿಷಯಾಧಾರಿತ ಪಿಹೆಚ್.ಡಿ. ಸಂಶೋಧನೆಗಾಗಿ ಉನ್ನತ ‘ಡಾಕ್ಟರೇಟ್ ಪದವಿ’, ಹಂಪಿ ವಿಶ್ವವಿದ್ಯಾನಿಲಯದಿಂದ ‘ತುಳುನಾಡಿನ ಚರಿತ್ರೆ’ ವಿಷಯದ ಸಂಶೋಧನೆಗಾಗಿ ಎಂ.ಫಿಲ್ ಪದವಿ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಅಲ್ಲದೆ ಬರಹಗಾರ, ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ನಿರೂಪಿಸಿದ ನಿರೂಪಕ, ವಿದೇಶಗಳಲ್ಲೂ ಉಪನ್ಯಾಸ ನೀಡಿದ ಚಿಂತಕ. ಹಾಗೆಯೇ ಅಂತಾರಾಷ್ಟ್ರೀಯ ಜೆಸಿಐ ಯುವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರು. ಪ್ರಸ್ತುತ ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಶೋಧನಾ ಪ್ರಶಸ್ತಿಯು ೧೦ ಸಾವಿರ ರೂಪಾಯಿಗಳ ನಗದು ಮೊತ್ತವನ್ನು ಒಳಗೊಂಡಿದ್ದು ಪುರಸ್ಕೃತ ಕೃತಿಯು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರಧಾನ ಸಮಾರಂಭದಂದು ಬಿಡುಗಡೆಯಾಗಲಿದೆ
