ಮಂಗಳೂರು: ಆದಿಉಡುಪಿಯ ಕ್ಷೌರಿಕ ಸತೀಶ್ ಸುವರ್ಣ ತಾವು ದುಡಿದ ಒಂದು ದಿನದ ದುಡಿಮೆಯ ಹಣ 2,220ರೂ. ಗಳನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಶಾಲೆಗೆ ದೇಣಿಗೆಯಾಗಿ ನೀಡಿದರು.
ಹರೇಕಳ ನ್ಯೂಪಡ್ಪುವಿನಲ್ಲಿರುವ ಶಾಲೆಗೆ ಸ್ನೇಹಿತನ ಜೊತೆಗೆ ಭೇಟಿ ನೀಡಿದ ಅವರು ಹಾಜಬ್ಬ ಅವರ ಸಮ್ಮುಖದಲ್ಲಿ ದೇಣಿಗೆ ನೀಡಿದರು. ಆದಿಉಡುಪಿಯ ಗೌರವ್ ಸೆಲೂನಿನ ಮಾಲೀಕಉಪ್ಪೂರಿನಲ್ಲಿರುವ ಆಶ್ರಮದ 45ಮಂದಿ ವಿಶೇಷ ಚೇತನರಿಗೆ ಉಚಿತವಾಗಿ ಕ್ಷೌರಸೇವೆ ಮಾಡುತ್ತಿದ್ದು ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ . ಹಾಜಬ್ಬರ ತ್ಯಾಗದ ಮುಂದೆ ತನ್ನದೂ ಕಿರುಕಾಣಿಕೆ ಇರಲಿ ಎಂಬ ಉದ್ದೇಶದಿಂದ ಉಡುಪಿಯಿಂದ ಬೈಕ್ ನಲ್ಲಿ ಹಾಜಬ್ಬರ ಶಾಲೆಗೆ ಬಂದು ದೇಣಿಗೆ ಸಮರ್ಪಿಸಿದ್ದಾರೆ .
ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸಿರುವ ಪದ್ಮಶ್ರೀ ಹಾಜಬ್ಬ, ದುಡಿಯುವವರಿಂದ ಹಣ ತೆಗೆದುಕೊಳ್ಳುವಾಗ ಬೇಜಾರಾಗುತ್ತದೆ. ಆದರೆ ಅವರೇ ಖುದ್ದಾಗಿ ಬಂದು ಒತ್ತಾಯಪಡಿಸಿ ದೇಣಿಗೆಯನ್ನು ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು. ಶಾಲಾ ಶಿಕ್ಷಕಿ ಸುಷೀಮ್ ಶೆಟ್ಟಿ ಉಪಸ್ಥಿತರಿದ್ದರು.
