ಬೆಂಗಳೂರು, ಅ.30: ಕರ್ನಾಟಕ ರಾಜ್ಯದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 59 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಎಸ್ ಜಾನಕಿ, ಇಸ್ರೋ ನಿವೃತ್ತ ವಿಜ್ಞಾನಿ ಡಾ.ಕಸ್ತೂರಿ ರಂಗನ್, ನಿವೃತ್ತ ನ್ಯಾಯಾಧೀಶ ವೆಂಕಟಾಚಲಯ್ಯ ಮುಂತಾದ ಪ್ರಮುಖರು ಪಟ್ಟಿಯಲ್ಲಿದ್ದಾರೆ.

ಸಾಹಿತಿ ಚನ್ನವೀರ ಕಣವಿ, ಬರಗೂರು ರಾಮಚಂದ್ರಪ್ಪ, ಮರುಳ ಸಿದ್ದಪ್ಪ, ಎಚ್.ಜಿ.ಸಿದ್ದರಾಮಯ್ಯ ಸೇರಿದಂತೆ ಐದು ಮಂದಿ ಸದಸ್ಯರ ಸಮಿತಿ ಸಿದ್ಧಪಡಿಸಿರುವ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿತ ಹಾಕಿ, ಯಾವುದೇ ವಿವಾದ ಎದುರಾದರೆ ಸಮಿತಿ ಸದಸ್ಯರೇ ಹೊಣೆ ಎಂಬ ಎಚ್ಚರಿಕೆ ನೀಡಿದ್ದಾರೆ. ಸುಮಾರು 1700ಕ್ಕೂ ಹೆಚ್ಚು ಅರ್ಜಿಗಳು ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದವು. ಗಣ್ಯರ ಸೇವೆ ಪರಿಗಣಿಸಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡಲಾಗಿದ್ದು, ಅರ್ಜಿ ಸಲ್ಲಿಸದೆ ಇರುವವರನ್ನು ಪರಿಗಣಿಸಿ ಪ್ರಶಸ್ತಿ ನೀಡಲು ಕ್ರಮ ವಹಿಸಲಾಗಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾಜಸೇವೆ, ಚಿತ್ರೋದ್ಯಮ, ಪತ್ರಿಕೋದ್ಯಮ, ಸಾಹಿತ್ಯ, ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ 59 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸರ್ಕಾರಿ ಆದೇಶ ಸಂಖ್ಯೆ : ಕಸಂವಾ/ 695/ಕಸಧ/2014, 30.10.2014 ಅನ್ವಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದಾರೆ.
