ಬಂಟ್ವಾಳ: ಬಂಟ್ವಾಳ ತಾಲೂಕು ಕೊಯಿಲ, ಅಣ್ಣಳಿಕೆ ಯಕ್ಷಾಭಿಮಾನಿಗಳು ಇದರ ವತಿಯಿಂದ ರೋಟರಿಕ್ಲಬ್ ಲೊರೆಟ್ಟೊಹಿಲ್ಸ್ ಸಹಯೋಗದಲ್ಲಿ 13ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಯಕ್ಷಗಾನ ಕಲಾವಿದ, ಸುವರ್ಣನಾಡು ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ದಿ.ಶ್ರೀ ವಿಶ್ವನಾಥ ಸ್ವಾಮೀಜಿ ಅವರ ಸಂಸ್ಮರಣೆ ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಹಾಸ್ಯಗಾರ ಪದ್ಮನಾಭ ಶೆಟ್ಟಿಗಾರ್ ಅವರಿಗೆ ಸಮ್ಮಾನ ಕಾರ್ಯಕ್ರಮ ಅಣ್ಣಳಿಕೆ ವಿಘ್ನೇಶ್ವರ ಸಭಾಭವನದಲ್ಲಿ ಅ.31ರಂದು ಜರಗಿತು.
ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ಶ್ರೀ ವಿಶ್ವನಾಥ ಸ್ವಾಮೀಜಿ ಅವರು ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಕಲಾಭಿಮಾನಿಗಳ ಪ್ರೀತ್ಯಾಧಾರಗಳಿಗೆ ಪಾತ್ರರಾದವರು. ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕತೆ ಜಾಗೃತಿಗೊಳಿಸಿದ ಅವರು ಸ್ಮರಣೀಯರು ಎಂದು ಹೇಳಿದರು.

ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ, ಪದ್ಮನಾಭ ಶೆಟ್ಟಿಗಾರ್ ಅವರು ಪ್ರಚಾರಕ್ಕೆ ಬಾರದ ಶ್ರೇಷ್ಠ ಕಲಾವಿದರು. ಸದಭಿರುಚಿಯ ಹಾಸ್ಯದ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರು ಎಂದರು.ರೋಟರಿ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ ಸಮ್ಮಾನ ಪತ್ರ ವಾಚಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್, ಪ್ರಗತಿಪರ ಕೃಷಿಕ ನೋಣಯ್ಯ ಶೆಟ್ಟಿಗಾರ್, ಯಕ್ಷಾಭಿಮಾನಿಗಳು ಸಂಚಾಲಕ ರಾಮಚಂದ್ರ ಶೆಟ್ಟಿಗಾರ್, ಯಕ್ಷಗಾನ ಸಂಘಟಕ ಹರಿಪ್ರಸಾದ್ ರಾವ್ ಸಿದ್ದೈಕೋಡಿ, ಸಮಿತಿಯ ಸುರೇಶ್ ಅಣ್ಣಳಿಕೆ,ರಾಜಕುಮಾರ್ ಶೆಟ್ಟಿಗಾರ್, ಅಂಕಿತಾ, ಆಕಾಶ್,ಸುಮಿತ್ರಾ ಆರ್.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ತಾಳಮದ್ದಳೆ ನಡೆಯಿತು
