ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ 2019-20ರ ವಿಶೇಷ ಅನುದಾದಡಿಯಲ್ಲಿ ಕರೆಯಲಾಗಿರುವ ಟೆಂಡರಿನಲ್ಲಿ ಸೂಚಿಸಿರುವ ಕಾಮಗಾರಿಗಳಲ್ಲಿ ಕೆಲವೊಂದು ಕಾಮಗಾರಿಗಳು ಈಗಾಗಲೇ ನಡೆದಿದ್ದು, ಕಾನೂನುಬಾಹಿರವಾಗಿ ಟೆಂಡರ್‌ನಲ್ಲಿ ಸೇರಿಸಲಾಗಿದೆ. ಎಸ್‌ಎಫ್‌ಸಿ ನಿಧಿಯಲ್ಲಿ ನಡೆದ 2 ಕೋಟಿ ರೂಪಾಯಿ ಕಾಮಗಾರಿಯ ಬಗ್ಗೆ ಸಂಶಯವಿದೆ. ಈಗಾಗಲೇ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದು ಮೂಡುಬಿದಿರೆ ಸಭೆಯ ಸಾಮಾನ್ಯಸಭೆಯಲ್ಲಿ ಪ್ರತಿಪ್ರಕ್ಷದ ಸದಸ್ಯರು ಪ್ರಸ್ತಾಪಿಸಿದ್ದು, ಆಡಳಿತ-ಪ್ರತಿಕ್ಷದ ಸದಸ್ಯರ ನಡುವೆ ಮಾತಿನ ಚಕಾಮಕಿ ನಡೆಯಿತು.
ವಿಚಾರವನ್ನು ಪ್ರಸ್ತಾಪಿಸಿದ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ ಅನುದಾನ ಹಂಚಿಕೆಯಲ್ಲೂ ಈ ಸಂದರ್ಭ ತಾರತಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಮನಿರ್ದೇಶಿತ ಸದಸ್ಯರು ಪ್ರತಿಪಕ್ಷದ ಸದಸ್ಯರ ಜೊತೆ ಈ ಕುರಿತು ಚರ್ಚೆ ವಾಗ್ವಾದಕ್ಕೆ ಇಳಿದಾಗ, ನಾಮನಿರ್ದೇಶಿತ ಸದಸ್ಯರು ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಕೈಪಿಡಿಯಲ್ಲಿರುವಂತೆ ಯಾವ ವಿಷಯಕ್ಕೆ ಚರ್ಚೆ ಮಾಡಬೇಕೋ ಆ ವಿಷಯಕ್ಕೆ ಚರ್ಚೆ ಮಾಡಬೇಕೆಂದು ಕೊರಗಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಆಡಳಿತ ಸದಸ್ಯರು ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಾಮಕಿ ನಡೆಯಿತು. ಜಿಲ್ಲಾಧಿಕಾರಿಯವರಿಗೆ ದೂರು ನೀಡಿರುವುದರಿಂದ ಅವರ ಆದೇಶ ಬಂದ ಬಳಿಕ ಚರ್ಚಿಸೋಣ ಎಂದು ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಮಾಹಿತಿ ನೀಡಿದರು.
ಪಾರ್ಕಿಂಗ್ ಸಮಸ್ಯೆಗೆ ಸಭೆ: ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಸಮಸ್ಯೆ ಸಮರ್ಪಕವಾಗಿಲ್ಲ. ಪೊಲೀಸರು ಎಲ್ಲೆಂದರಲ್ಲಿ ದಂಢ ವಿಧಿಸುತ್ತಿರುವುದರಿಂದ ಜನರು ಕೂಡ ಗಾಬರಿಯಾಗಿದ್ದಾರೆ. ಈ ಬಗ್ಗೆ ಪುರಸಭೆ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಪುರಸಭೆಯ ನಿಯಮದ ಪ್ರಕಾರ ಕೆಲವು ರೂಟ್‌ಗಳಿಗೆ ಹೋಗುವ ಬಸ್‌ಗಳು ನಿಲ್ಲುತ್ತಿಲ್ಲ. ಪುರಸಭೆಯ ನಿರ್ದೇಶನ ಪಾಲಿಸದ ಬಸ್‌ಗಳು ಬಸ್ ನಿಲ್ದಾಣದಿಂದ ಹೊರಗೆ ಹೋಗಿ ನಿಲ್ಲಲಿ ಎಂದು ಕೊರಗಪ್ಪ ಹೇಳಿದರು. ನೋ ಪಾರ್ಕಿಂಗ್ ಬೋರ್ಡ್ಗಳು ಪುರಸಭೆಯ ಗಮನಕ್ಕೆ ಬಾರದೆ ಪೇಟೆಯ ಕೆಲವು ಭಾಗಗಳಲ್ಲಿ ಹಾಕಲಾಗಿದೆ ಎಂದು ಸದಸ್ಯ ಪುರಂದರ ದೇವಾಡಿಗ ಸಭೆಯ ಗಮನಕ್ಕೆ ತಂದರು. ನಗರದ ಪಾರ್ಕಿಂಗ್ ವ್ಯವಸ್ಥೆ, ಬಸ್ ನಿಲ್ದಾಣದ ಅವ್ಯವಸ್ಥೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಕಲ್ಲಬೆಟ್ಟು ಹಿಂದೂ ರುದ್ರಭೂಮಿಗೆ ಕಾಯ್ದಿರಿಸಿದ ಜಾಗದ ಹತ್ತಿರ ಪರಿಶಿಷ್ಟ ಸಮುದಾಯದ ಮನೆಗಳಿದೆ. ಇಲ್ಲಿ ಸ್ಮಶಾನ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಸದಸ್ಯರಾದ ಜೊಸ್ಸಿ ಮೆನೇಜಸ್ ಆಕ್ಷೇಪ ವ್ಯಕ್ತಪಡಿಸಿದರು. ಹಲವು ವರ್ಷಗಳ ಹಿಂದೆಯೇ ಪ್ರಸ್ತಾವಿತ ಜಾಗವನ್ನು ಸ್ಮಶಾನ ನಿರ್ಮಾಣಕ್ಕೆಂದು ಕಾಯ್ದಿರಿಸಲಾಗಿದೆ. ಮುಂದೆ ಗಡಿ ಗುರುತು ಹಾಕಿ, ಅದರ ಸಾಧಕ-ಬಾಧಕಗಳನ್ನು ಗಮನಿಸಿ ಮುಂದುವರೆಯೋಣ ಎಂದು ಅಧ್ಯಕ್ಷರು ಸಮಜಾಯಿಸಿದರು.
ಮೂಡ ಅಧಿಕಾರಿಗಳೊಂದಿಗೆ ಸಭೆಯನ್ನು ಸೆ.24ರಂದು ನಡೆಸಲಾಗುವುದೆಂದು ಸಭೆಯಲ್ಲಿ ತಿಳಿಸಲಾಯಿತು.
ಸ್ಥಾಯಿ ಸಮಿತಿ ಸದಸ್ಯ ನಾಗರಾಜ ಪೂಜಾರಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಕರೀಂ, ಶ್ವೇತಾ ಪ್ರವೀಣ್ ಜೈನ್, ರಾಜೇಶ್ ನಾಯ್ಕ್, ರಾಜೇಶ್ ಮಲ್ಯ, ಸುರೇಶ್ ಕೋಟ್ಯಾನ್, ಸುರೇಶ್ ಪೂಜಾರಿ, ದಿನೇಶ್ ಪೂಜಾರಿ, ರೂಪಾ ಶೆಟ್ಟಿ, ಗಿರೀಶ್ ಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಇಂದು ಎಂ, ಕಚೇರಿ ವ್ಯವಸ್ಥಾಪಕ ಗೋಪಾಲ ನಾಯ್ಕ್, ಇಂಜಿನಿಯರ್ ಪದ್ಮನಾಭ್ ಕಟೀಲ್ ಸಭೆಯಲ್ಲಿದ್ದರು.
