ಬಂಟ್ವಾಳ : ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪುರುಷೋತ್ತಮ ನಾಯ್ಕ್ ಮಾತನಾಡಿದರು. ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಿದ ಒಟ್ಟು ೭೦೦ ಮಂದಿ ಕಾರ್ಮಿಕರ ಪೈಕಿ ಈಗಾಗಲೇ ೪೫೦ ಕ್ಕೂ ಮಿಕ್ಕಿ ಮಂದಿ ಕಾರ್ಮಿಕರಿಗೆ ಕೋವಿಡ್ ಆಹಾರ ಕಿಟ್ ವಿತರಿಸಲಾಗಿದೆ. ಇಲ್ಲಿ ಯಾವುದೇ ರಾಜಕೀಯ ಅಥವಾ ಜಾತಿ- ಧರ್ಮಗಳ ತಾರತಮ್ಯ ನಡೆಸಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪುರುಷೋತ್ತಮ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಥಳಾವಕಾಶ ಕೊರತೆ ಹಿನ್ನೆಲೆಯಲ್ಲಿ ಆಹಾರ ಕಿಟ್ ಗಳನ್ನು ಪಂಚಾಯಿತಿ ಸಮೀಪದ ಸೇವಾ ಕೇಂದ್ರದಲ್ಲಿ ದಾಸ್ತಾನು ಇರಿಸಿ ಅರ್ಹರಿಗೆ ವಿತರಣೆ ಮಾಡಲಾಗಿದೆ. ಆದರೆ ಆಹಾರ ಕಿಟ್ ದಿನಸಿ ಅಂಗಡಿಯಲ್ಲಿ ಪತ್ತೆಯಾಗಿದೆ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ಅನಗತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಕ್ರಮ ದಾಸ್ತಾನು ಅಥವಾ ತಾರತಮ್ಯ ಬಗ್ಗೆ ಯಾವುದೇ ದಾಖಲೆಪತ್ರ ಇದ್ದರೆ ಅವರು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸೇವಾ ಕೇಂದ್ರದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಸಹಿತ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಜನತೆಗೆ ಮಾಹಿತಿ ನೀಡಲಾಗುತ್ತಿದೆ. ಈ ಪಂಚಾಯಿತಿನಲ್ಲಿ ಸೋತು ಕಂಗಾಲಾದ ಕಾಂಗ್ರೆಸ್ಸಿಗರು ಗೋಲ್‌ಮಾಲ್ ನಡೆದಿದೆ ಆರೋಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಸದಸ್ಯರಾದ ಕಿಶೋರ್ ಶೆಟ್ಟಿ, ಪುರುಷೋತ್ತಮ ಎಸ್., ಅರುಣ್ ಬೋರುಗುಡ್ಡೆ, ರವಿ ಅಂಚನ್, ಚೇತನ್ ಏಲಬೆ, ರಂಜಿತ್ ಕೆದ್ದೇಲು, ನಾರಾಯಣ ಪೂಜಾರಿ ದರ್ಖಾಸು, ಉಷಾ ರಮಾನಾಥ್, ಮಮತ ಸುಧೀರ್, ಶುಭ ಶಶಿಧರ್, ಚಿತ್ರಾಕ್ಷಿ ಮೊಗರ್ನಾಡು, ಮೋಹಿನಿ ನಾಟಿ, ರತ್ನಾವತಿ ನಿನ್ನಿಪಡ್ಪು ಪ್ರಮುಖರಾದ ಯಶೋಧರ ಕರ್ಬೆಟ್ಟು,ಪುರುಷೋತ್ತಮ ಸಾಲ್ಯಾನ್, ಸುರೇಶ್ ಕೋಟ್ಯಾನ್ ಮತ್ತಿತರರು ಇದ್ದರು.
