ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ದೃಶ್ಯ. ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ ವಿತರಣೆ ವೇಳೆ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಆ.೩೧ ರಂದು ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿ, ‘ಸುಮಾರು ೫೦ರಿಂದ ೬೦ ಮಂದಿ ಗುಂಪೊಂದು ಯಾವುದೇ ಪೂರ್ವಾನುಮತಿ ಪಡೆಯದೆ ತಾಲ್ಲೂಕು ಕಚೇರಿಗೆ ಒಳ ಪ್ರವೇಶಿಸಿ ಸರ್ಕಾರಿ ನಿತ್ಯಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದ್ದಾರೆ’. ಇಲ್ಲಿನ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ, ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದಾಗಿ ಆರೋಪಿಸಿದ್ದರು.
