Published On: Sun, Aug 1st, 2021

ಪೊಳಲಿಯಲ್ಲಿ ಭಕ್ತರ ದಂಡು, ಶುಕ್ರವಾರದ ಪೂಜೆಗೆ ಭಕ್ತರ ಸರತಿ ಸಾಲು, ಪ್ರಸಾದ ವಿತರಣೆ ಆರಂಭ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆಶಾಢ(ಶ್ರಾವಣ) ಶುಕ್ರವಾರವಾದ ಜು. ೩೦ರಂದು ಶುಕ್ರವಾರ ಭಾರೀ ಸಂಖ್ಯೆ ಭಕ್ತರು ಆಗಮಿಸಿದ್ದು, ಸರ್ಕಾರಿ ಆದೇಶದಂತೆಯೇ ಇಂದಿನಿಂದ ಇಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಆರಂಭವಾಯಿತು.gur-july-30-polali-1ನಾಲ್ಕು ದಿನಗಳ ಹಿಂದೆ ಇಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತಾದರೂ ತೀರ್ಥ-ಪ್ರಸಾದ ವಿತರಣೆ ನಿರ್ಬಂಧಿಸಲಾಗಿತ್ತು. ಹಾಗಾಗಿ ಭಕ್ತರ ಸಂಖ್ಯೆಯೂ ಅಷ್ಟಕ್ಕಷ್ಟಿತ್ತು. ದೇವಸ್ಥಾನದಲ್ಲಿ ತೀರ್ಥಪ್ರಸಾದ ವಿತರಣೆ ಮತ್ತು ಅಮ್ಮನವರಿಗೆ ಕುಂಕುಮಾರ್ಚನೆ ಹಾಗೂ ದೇವರೆದುರು `ಹೂವು ಕಟ್ಟಿ ಹಾಕು’ವಂತಹ ಸೇವೆಗಳು ಆರಂಭವಾಗಲಿದೆ ಎಂಬ ಸುದ್ದಿಯಂತೆ ಶುಭ ಶುಕ್ರವಾರ(ಜು.೩೦) ದೇವಾಲಯದಲ್ಲಿ ಮಹಿಳಾ ಭಕ್ತರ ಹರಿವು ಹೆಚ್ಚಾಗಿತ್ತು. ಮಾಸ್ಕ್ ಧರಿಸಿದ ಭಕ್ತರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಸರತಿ ಸಾಲಿನಲ್ಲಿ `ಅಂತರ ಕಾಪಾಡಿಕೊಂಡು’ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.gur-july-30-polali-3ಕೊರೊನಾ ಕಾಲದಲ್ಲಿ ಹಲವು ಕಷ್ಟಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿದ್ದ ಮನುಕುಲ ಈಗ ಒಂದಷ್ಟು ಉಸಿರು ಬಿಡುವ ವಾತಾವರಣ ಸೃಷ್ಟಿಯಾಗಿದ್ದು, ಮಹಾಮಾರಿಯ ಅಲೆಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಹಾಗಾಗಿ ದೇವಾಲಯಗಳಿಗೆ ಪ್ರವೇಶಿಸಲು ಭಕ್ತರಿಗೆ ಅವಕಾಶ ಸಿಕ್ಕಿದೆ. ಕೋವಿಡ್ ಮಾರ್ಗಸೂಚಿ ಸಡಿಲಿಕೆಯನ್ವಯ ಎಲ್ಲ ದೇವಾಲಯಗಳಂತೆ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದಲ್ಲೂ ಭಕ್ತರು ದೇವರ ದರ್ಶನ ಮಾಡಲಾರಂಭಿಸಿದ್ದಾರೆ. ಎಂದಿನಂತೆ ದೇವಾಲಯದಲ್ಲಿ ತೀರ್ಥಪ್ರಸಾದ ವಿತರಿಸಲು ನಾಲ್ಕೈದು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸರತಿ ಸಾಲಿಂದ ಭಕ್ತರ ನೂಕುನುಗ್ಗಲಿರಲಿಲ್ಲ.gur-july-30-polali-2ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದರೂ ಇಂದು ಆಗಾಗ್ಗೆ ಬಿಸಿಲುಮೋಡ ಕಂಡು ಬಂತೇ ವಿನಾ ಮಳೆ ಸುರಿದಿಲ್ಲ. ಸೆಖೆ ಹೆಚ್ಚಾಗಿದ್ದರೂ ಬೆಳಿಗ್ಗಿನ ಅವಧಿಯಲ್ಲಿ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿದರು. ಆದರೆ ಇಲ್ಲಿ ಇನ್ನೂ ಪಲ್ಲಪೂಜೆ ಹಾಗೂ ಇತರ ದೊಡ್ಡ ಪೂಜೆಗಳು ಆರಂಭಗೊಂಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಪೂಜೆಗಳು ಆರಂಭವಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕ ವರ್ಗ ಸುಳಿವು ನೀಡಿದೆ.gur-july-30-polali-4ವ್ಯಾಪಾರಿಗಳಲ್ಲಿ ನಗುವಿನಲೆ! ಕೋವಿಡ್ ಅಲೆಯಿಂದ ದೇವಸ್ಥಾನ ಬಣಗುಡುತ್ತಿದ್ದರೆ, ಹೂವಿನಂಗಡಿಗಳು ಮುಚ್ಚಿದ್ದವು. ಎರಡೂವರೆ ತಿಂಗಳಿಂದ ವ್ಯಾಪಾರ ಕಾಣದ ಹೂವು, ಹಣ್ಣುಹಂಪಲು, ಕಾಯಿಯ ವ್ಯಾಪಾರಿಗಳಿಗೆ ಇಂದು ಸಾಕಷ್ಟು ವ್ಯಾಪಾರದ ದಿನವಾಗಿತ್ತು. ದೇವಸ್ಥಾನದ ಸುತ್ತಲಿರುವ ಇತರ ಅಂಗಡಿಗಳಲ್ಲೂ ಜನರು ಖರೀದಿಯಲ್ಲಿ ತೊಡಗಿದ್ದು, ಪೊಳಲಿಯ ಅಂಗಡಿ ವ್ಯಾಪಾರಿಗಳು ಕೋವಿಡ್ ಅಲೆಯ ಬದಲಿಗೆ ಇಂದು ‘ನಗುವಿನ ಅಲೆ’ಯಲ್ಲಿದ್ದ ದೃಶ್ಯ ಸಾಮಾನ್ಯವಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter