ಬಂಟ್ವಾಳ: ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಪಡುಕೋಡಿ ಗ್ರಾಮದ ಪಂಜೋಡಿ ಎಂಬಲ್ಲಿ ಕೃಷಿಕರಾದ ಶಾರದ ಶೆಟ್ಟಿ ಎಂಬವರಿಗೆ ಸೇರಿದ ಕುಮ್ಕಿ ಹಕ್ಕಿನ ಕೃಷಿ ಭೂಮಿಯನ್ನು ಸ್ಥಳೀಯ ಪಂಚಾಯತಿ ಅಕ್ರಮವಾಗಿ ತಮ್ಮ ಸ್ವಾಧೀನಕ್ಕೆ ಪಡೆಯಲು ದಬ್ಬಾಳಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಸತ್ಯಶೋಧನ ಸಮಿತಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

e398cea4-7940-4d7c-9a80-0adbb679c63d

ಶಾರದಾ ಶೆಟ್ಟಿಯವರ ವರ್ಗ ಜಮೀನಿಗೆ ತಾಗಿಕೊಂಡೆ ಇರುವ ಮೂರುವರೆ ಎಕರೆ ಕುಮ್ಕಿ ಹಕ್ಕಿನ ಕೃಷಿ ಜಮೀನಿನಲ್ಲಿ ಈ ಹಿಂದೆ ಬಾಳೆ, ಬಳಿಕ ರಬ್ಬರ್ ಬೆಳೆಸಲಾಗಿತ್ತು. ಇದೀಗ ರಬ್ಬರ್ ತೆರವುಗೊಳಿಸಿ ಅಡಿಕೆ ಬೆಳೆಸಲು ನೆಲಸಮತಟ್ಟು ಮಾಡುವ ವೇಳೆ ಪಂಚಾಯತಿ ಪಿಡಿಓ ಹಾಗೂ ಕೆಲ ಸದಸ್ಯರು ಅಕ್ರಮವಾಗಿ ಪ್ರವೇಶಿಸಿ ದಬ್ಬಾಳಿಕೆ ನಡೆಸಿ ಕೃಷಿ ಕಾರ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ರೈತ ಸಂಘದ ಜಿಲ್ಲಾ ಸಮಿತಿಗೆ ದೂರು ಬಂದ ಹಿನ್ನಲೆಯಲ್ಲಿ ರೈತಸಂಘ ವಿವಾದಿತ ಸ್ಥಳಕ್ಕೆ ಭೇಟಿ ನೀಡಿತು. ಸತ್ಯಶೋಧನೆಯ ವೇಳೆ ಈ ಜಮೀನು ಶಾರದಾ ಶೆಟ್ಟಿಯವರಿಗೆ ಸೇರಿರುವುದಾಗಿ ತಿಳಿದು ಬಂದಿದ್ದು ಗ್ರಾಮಪಂಚಾಯತಿ ಇನ್ನು ಮುಂದೆ ಅವರಿಗೆ ತೊಂದರೆ ನೀಡಿದ್ದಲ್ಲಿ ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ರೈತ ಸಂಘ ಹಸಿರು ಸೇನೆ ಎಚ್ಚರಿಸಿದೆ. ಈಗಾಗಲೇ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಲಯವು ಮುಂದಿನ ವಿಚಾರಣೆಯವರೆಗೆ ಪಂಚಾಯತಿ ಪಿಡಿಓ ಅಥವಾ ಸದಸ್ಯರು ಹಸ್ತಕ್ಷೇಪ ನಡೆಸದಂತೆ ತಡೆಯಾಜ್ಞೆಯನ್ನು ನೀಡಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ನಡಿಕಂಬಳಗುತ್ತು ಮನೋಹರ ಶೆಟ್ಟಿ ಮಾತನಾಡಿ ವಸಂತಶೆಟ್ಟಿ ಅರ್‍ಕೆದೊಟ್ಟು ಎಂಬವರು ಪಂಜೋಡಿಯಲ್ಲಿ ಅಕ್ರಮವಾಗಿ ೮ ಎಕ್ರೆ ಸರಕಾರಿ ಜಮೀನನ್ನು ಕಬಳಿಸಿ ಕೃಷಿ ಜಮೀನಾಗಿ ಪರಿವರ್ತಿಸಿದ್ದಾರೆ ಎಂದು ಸ್ಥಳೀಯ ಪಂಚಾಯತ್ ಆರೋಪಿಸಿ, ದೌಜ್ಯನ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ವಸಂತ ಶೆಟ್ಟಿ ರೈತ ಸಂಘಕ್ಕೆ ದೂರು ನೀಡಿದ್ದರು. ತನ್ನ ಹಿರಿಯರಿಂದ ಕುಮ್ಕಿ ಹಕ್ಕಿನ ಮೂಲಕ ಬಂದಿರುವ ಜಮೀನಿನಲ್ಲಿ ಶಾರದಾ ಶೆಟ್ಟಿಯವರು ಕೃಷಿ ಮಾಡುತ್ತಿರುವುದು ಸಮಿತಿಯ ಸತ್ಯಶೋಧನೆಯ ವೇಳೆ ತಿಳಿದು ಬಂದಿದ್ದು ಈ ವಿವಾದಿತ ಜಮೀನಿಗೂ ವಸಂತ ಶೆಟ್ಟಿಯರಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿರುವುದಾಗಿ ತಿಳಿಸಿದರು. ಇರ್ವತ್ತೂರು ಪಂಚಾಯತಿ ಸದಸ್ಯ ಸುಧೀಂದ್ರ ಶೆಟ್ಟಿ ಎಂಬವರ ಕುಮ್ಮಕ್ಕಿನಂತೆ ಪಂಚಾಯತಿ ಅಧಿಕಾರಿಗಳು ಜಮೀನು ಸ್ವಾಧೀನ ಪಡಿಸಲು ಅಕ್ರಮವಾಗಿ ಪ್ರವೇಶ ಮಾಡಿರುವುದಾಗಿ ಆರೋಪಿಸಿದ್ದಲ್ಲದೆ, ಇನ್ನು ಮುಂದೆ ಇದೇ ರೀತಿ ದೌಜ್ಯನ್ಯ ಎಸಗಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿ ರೈತನ ಭೂಮಿಗೆ ಅಕ್ರಮವಾಗಿ ಅಧಿಕಾರಿಗಳು ಪ್ರವೇಶಿಸಿ ತೊಂದರೆ ನೀಡಿದ್ದಲ್ಲಿ ನಿರಂತರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತುಳುನಾಡು ಪಂಚಾಯತ್ ಜಾಗೃತ ವೇದಿಕೆಯ ಮುಖ್ಯಸ್ಥ ದಯಾನಂದ ಶೆಟ್ಟಿ ಮಾತನಾಡಿ ವರ್ಗ ಜಮೀನಿಗೆ ತಾಗಿಕೊಂಡಿರುವ ಕುಮ್ಕಿ ಜಮೀನಿನ್ನು ತನ್ನ ಸ್ವಾಧೀನಕ್ಕ ಪಡೆದುಕೊಳ್ಳಲು ಪಂಚಾಯತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಪಂಚಾಯತಿಯ ಸರ್ವಾಧಿಕಾರ ದೋರಣೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಇನ್ನುಮುಂದೆ ತೊಂದರೆ ನೀಡಿದ್ದಲ್ಲಿ ನಮ್ಮ ಸಂಘದ ಮೂಲಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭ ಕೃಷಿಕರಾದ ಶಾರದಾ ಶೆಟ್ಟಿ ಪಂಜೋಡಿ, ವಸಂತ ಶೆಟ್ಟಿ ಅರ್‍ಕೆದೊಟ್ಟು, ಪುತ್ತೂರು ತಾಲೂಕು ರೈತ ಸಂಘ ಹಸಿರು ಸೇನೆಯ ಸಂಚಾಲಕ ವಿನೋದ್ ಶೆಟ್ಟಿ, ಈಶ್ವರ ಮಂಗಲ ವಲಯ ಸಮಿತಿ ಅಧ್ಯಕ್ಷ ಶಿವಚಂದ್ರ, ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *