ಬಂಟ್ವಾಳ: ಶುಕ್ರವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಬಂಟ್ವಾಳದ ಕಲ್ಲಗುಡ್ಡೆ ಎಂಬಲ್ಲಿ ಮಣ್ಣು ಸಹಿತ ಆವರಣ ಗೋಡೆ ಮನೆಯೊಂದರ ಮೇಲೆ ಕುಸಿದು ಬಿದ್ದು ಮನೆಮಂದಿ ಪವಾಡ ಸದೃಶ್ಯರಾಗಿ ಪಾರಾದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಮನೆ ಸಂಪೂರ್ಣ ಜಖಂಗೊಂಡಿದ್ದು, ೫ ಲಕ್ಷ ರೂಪಾಯಿಗಿಂತಲೂ ಅಧಿಕ ನಷ್ಟ ಸಂಭವಿಸಿದೆ.

ಸೋಮನಾಥ ಕುಲಾಲ್ ಎಂಬವರಿಗೆ ಸೇರಿದ ಈ ಮನೆಯನ್ನು ನವೀನ್ ಎಂಬವರಿಗೆ ವಾಸ್ತವ್ಯಕ್ಕಾಗಿ ಬಾಡಿಗೆಗೆ ನೀಡಲಾಗಿತ್ತು. ಅವರು ಪತ್ನಿ ಪವಿತ್ರ ಹಾಗೂ ಮಗಳೊಂದಿಗೆ ಈ ಮನೆಯಲ್ಲಿ ವಾಸವಿದ್ದು, ಶುಕ್ರವಾರ ತಡರಾತ್ರಿ ೧೨.೩೦ರ ವೇಳೆಗೆ ಮನೆಪಕ್ಕದ ತಡೆಗೋಡೆ ಕುಸಿದು ಮನೆಯ ಗೋಡೆಗಳನ್ನು ಸೀಳಿ ಒಳ ಬಂದಿದೆ. ಮನೆಮಂದಿ ಪಕ್ಕದಲ್ಲೇ ಮಲಗಿದ್ದರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು ಗೋಡೆಗಳು ಕುಸಿದು ವಾಲಿ ನಿಂತಿದೆ. ಈ ಮನೆಯಲ್ಲಿದ್ದ ಫ್ಯಾನ್ ಮತ್ತಿತರ ಎಲೆಕ್ಟ್ರೋನಿಕ್ಸ್ ವಸ್ತುಗಳು, ಮನೆಯ ಹೊರ ಬಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖರಾದ ರಮನಾಥ ಪೈ ಮೊದಲಾದವರು ಸೋಮವಾರ ಬೆಳಿಗ್ಗೆ ಭೇಟಿ ನೀಡಿದ್ದಾರೆ. ಗ್ರಾಮಕರಣಿಕ ಪ್ರದೀಪ್ ಅವರು ಸ್ಥಳ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.

By Suddi9

Leave a Reply

Your email address will not be published. Required fields are marked *