ಕೈಕಂಬ: ಗುರುಪುರ ಕೈಕಂಬ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗುರುವಾರದಿಂದ(ಜೂ. 3) ಜೂನ್ 7ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂಪೂರ್ಣ ಲಾಕ್‍ಡೌನ್ ಮಾಡಲು ಈ ಭಾಗದ ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಗುರುಪುರ-ಕೈಕಂಬ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ವೃದ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಅಂಗಡಿಮುಂಗಟ್ಟು ಬಂದ್ ಮಾಡಿ ಸಂಪೂರ್ಣ ಲಾಕ್‍ಡೌನ್‍ಗೆ ಬೆಂಬಲಿಸಿದರೆ ಮಾತ್ರ ಸೋಂಕಿನ ಮೇಲೆ ಹಿಡಿತ ಸಾಧಿಸಬಹುದು ಎಂದು ಸಮಿತಿ ಸದಸ್ಯರೂ ಆಗಿರುವ ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಸುದರ್ಶನ್ ಮತ್ತು ಸಂಪತ್ ತಿಳಿಸಿದರು.
ಸಮಿತಿಯು ಈಗಾಗಲೇ ಗುರುಪುರ, ಕಂದಾವರ, ಗಂಜಿಮಠ ಮತ್ತು ಪಡುಪೆರಾರ ಗ್ರಾಮ ಪಂಚಾಯತ್ ಕಚೇರಿಗಳಿಗೆ ತೆರಳಿ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‍ಡೌನ್ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿ ಮನವರಿಕೆ ಮಾಡಿದೆ. ಅಧಿಕಾರಿ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಗುರುವಾರದಿಂದ ಮೆಡಿಕಲ್, ಹಾಲು, ದಿನಪತ್ರಿಕೆ ಹಂಚಿಕೆ ವಹಿವಾಟಿಗೆ ಅವಕಾಶವಿದೆ. ಹಾಲಿನ ಅಂಗಡಿಗಳಲ್ಲಿ ದಿನಸಿ ಮಾರಾಟ ಮಾಡದೆ, ಹಾಲಿನ ಪೊಟ್ಟಣ ಮಾತ್ರ ಮಾರಾಟ ಮಾಡಬೇಕು. ಬುಧವಾರ ಎಂದಿನಂತೆ ಬೆಳಿಗ್ಗೆ 6ರಿಂದ 10 ಗಂಟೆಯೊಳಗೆ ಅಗತ್ಯ ಸೊತ್ತು ಖರೀದಿಸಲು ಅವಕಾಶವಿರುತ್ತದೆ ಎಂದು ಸಮಿತಿ ಹೇಳಿದೆ.
“ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಸ್ವಯಂ-ಪ್ರೇರಿತ ಲಾಕ್‍ಡೌನ್’ ಅವಶ್ಯ” ಎಂದು ಕಂದಾವರ ಚರ್ಚ್ ಧರ್ಮಗುರು ಫಾ. ಆ್ಯಂಟನಿ ಲೋಬೊ ಹೇಳಿದರು.
“ವ್ಯಾಪ್ತಿ ಪ್ರದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಹತ್ತಿಕ್ಕುವ ದೆಸೆಯಲ್ಲಿ ಸ್ವಯಂ-ಪ್ರೇರಿತ ಸಂಪೂರ್ಣ ಲಾಕ್‍ಡೌನ್ ಮಾಡುವ ಅಗತ್ಯವಿದೆ. ಇದಕ್ಕೆ ಸಾರ್ವಜನಿಕರ ಸ್ವಯಂ ಸಹಕಾರ ಅತ್ಯವಶ್ಯ” ಎಂದು ಗುರುಪುರ ರೇಂಜ್ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ನೌಶಾದ್ ತಿಳಿಸಿದರು.
“ಕೋವಿಡ್ ಸೋಂಕಿತರ ಪತ್ತೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನವಾದರೂ ಸ್ವಯಂಪ್ರೇರಿತ ಬಂದ್‍ನ ಅಗತ್ಯವಿದೆ. ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ” ಎಂದು ಸಮಿತಿಯ ಪದಾಧಿಕಾರಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ಹರೀಶ್ ಮಟ್ಟಿ ಹೇಳಿದರು.
