ಮುಂಬಯಿ : ಜೋಕಟ್ಟೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಬೃಹನ್ಮುಂಬಯಿಯಲ್ಲಿನ ಸಾಹಿತಿ, ಲೇಖಕ, ಕವಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಅವರಿಗೆ ಜೋಕಟ್ಟೆಯ ಅಭಿಮಾನಿ ನಾಗರಿಕರಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜೋಕಟ್ಟೆಯ ದ.ಕ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು.

ಈ ಶುಭಾವಸರದಲ್ಲಿ ಮತ್ತು ಶ್ರೀನಿವಾಸ ಜೋಕಟ್ಟೆ ರಚಿತ ೩೮ನೇ ಕೃತಿ `ಆಯುರ್ವೇದ ಭೂಷಣ- ಸಮಾಜ ಬಂಧು ಡಾ| ಐ.ವಿ ರಾವ್’ ಕೃತಿಯನ್ನು ಲೇಖಕ, ಅಂಚೆ ಇಲಾಖೆಯ ನಿವೃತ್ತ ಪೋಸ್ಟ್ ಮಾಸ್ಟರ್ವಿಲಿಯಂ ಲೋಬೊ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಜೋಕಟ್ಟೆಅವರು ತನ್ನ ಹುಟ್ಟೂರಿನ ಬಾಲ್ಯದ ನೆನಪುಗಳು, ಒಡನಾಟ, ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿ ಪತ್ರಕರ್ತನಾಗಿ ಪರಿವರ್ತನೆಗೊಂಡ ಅಲ್ಲಿನ ಅನುಭವಗಳನ್ನು ನೆರೆದ ಅಭಿಮಾನಿಗಳಲ್ಲಿ ಹಂಚಿಕೊಂಡರು. ತನ್ನ ತಂದೆ ಡಾ| ಐ.ವಿ ರಾವ್ ಬಗ್ಗೆ ತಿಳಿಸಿ ವೈದ್ಯವೃತ್ತಿ, ಜೀವನಶೈಲಿ ಮತ್ತು ಸಮಾಜ ಸೇವೆಯ ಹಲವಾರು ಮಜಲುಗಳನ್ನು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.
ಜೋಕಟ್ಟೆಯ ಹಿರಿಯ ನಾಗರಿಕರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಜಿ ಟಿ.ಎ ಆಲಿಯಬ್ಬಅವರು ಶ್ರೀನಿವಾಸ ಜೋಕಟ್ಟೆಗೆ ಶಾಲು ಹೊದಿಸಿ ಫಲಪುಷ್ಪ ನೀಡಿ `ಜೋಕಟ್ಟೆ ಸುಪುತ್ರ’ ಬಿರುರಾಂಕಿತಸ್ಮರಣಿಕೆ ನೀಡಿ ಸನ್ಮಾನಿಸಿದರು.
ಜೋಕಟ್ಟೆಯ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್ ಬಶೀರ್, ಜೋಕಟ್ಟೆಯ ಅಂಜುಮನ್ ಖುವ್ವತುಲ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಹಾಜಿ ಟಿ.ಅಬೂಬಕ್ಕರ್, ಅಥಾವುಲ್ಲಾ ಜೋಕಟ್ಟೆ, ಅಂಜುಮನ್ ವಿದ್ಯಾಸಂಸ್ಥೆಯ ಸಂಚಾಲಕ ಸಿರಾಜ್ ಮನೆಗಾರ, ಗ್ರಾಮ ಪಂಚಾಯತ್ ಸದಸ್ಯ ಶಿಹಾಬುದ್ದೀನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಮಯ್ಯದ್ದಿ, ಶ್ರೀಧರ್ ರಾವ್ ಜೋಕಟ್ಟೆ ಅತಿಥಿ ಅಭ್ಯಾಗತರುಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸನ್ಮಾನಿತರಿಗೆ ಶುಭಹಾರೈಸಿದರು.
ಕವಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮುಹಮ್ಮದ್ ಶರೀಫ್ ನಿರ್ಮುಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
