ಬಂಟ್ವಾಳ:  ಇಡೀ ದೇಶದಲ್ಲಿ ೨೦೨೩ಕ್ಕೆ ಸೂರು ಇಲ್ಲದ ಕುಟುಂಬಗಳಿರಬಾರದು ಎಂಬ ಪ್ರಧಾನಿ ಮೋದಿ ಅವರ ಆಶಯದಂತೆ ವಸತಿ-ನಿವೇಶನ ಹಂಚಿಕೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗುತ್ತಿದೆ. ರಾಜ್ಯದಲ್ಲಿಯೂ ಸೂರು ಇಲ್ಲದವರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರ ೧೦ ಲಕ್ಷ ಮನೆಗಳ ನಿರ್ಮಾಣ ಹಾಗೂ ಮುಂದಿನ ಜುಲೈ ತಿಂಗಳೊಳಗೆ ೯೭ ಸಾವಿರ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.  ಅವರು ಶುಕ್ರವಾರ ಬಂಟ್ವಾಳದ ನರಿಕೊಂಬಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, ರಾಜ್ಯದಲ್ಲು  ೨೨೪ ಕ್ಷೇತ್ರಗಳಲ್ಲು ೩೫೬೦ ಎಕರೆಗೂ ಮಿಕ್ಕಿ ಗ್ರಾಮಾಂತರ ಪ್ರದೇಶದಲ್ಲಿ ನಿವೇಶನಗಳನ್ನು ಕೊಡುವುದಕ್ಕೆ ಜಾಗ ಖರೀದಿ ಮಾಡಿದ್ದು, ಅಲ್ಲಿ ಮೂಲಭೂತ ಸೌಕರ್ಯ ವೃದ್ಧಿಗೆ ೭೫೦ ಕೋ.ರೂ.ಬೇಕಿದ್ದು, ಮುಂದಿನ ಬಜೆಟ್‌ನಲ್ಲಿ ಅದನ್ನು ಸೇರಿಸಲಾಗುತ್ತದೆ ಎಂದರು.      IMG_20210115_124015

ಅವ್ಯವಹಾರದ ವಿರುದ್ದ ಕ್ರಮ:
ಕಳೆದ ೬-೭ ವರ್ಷಗಳಿಂದ ವಸತಿ ಯೋಜನೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ೧೯ ಲಕ್ಷ ಮನೆಗಳನ್ನು ಮಂಜೂರು ಮಾಡಿ ಕೇವಲ ೨ ಸಾವಿರ ಕೋ.ರೂ.ಅನುದಾನ ಇಟ್ಟಿದ್ದರು. ಆದರೆ ೩೫ ಸಾವಿರ ಕೋ.ರೂ.ಬೇಕಾಗುತ್ತದೆ. ಪ್ರಸ್ತುತ ತಾನು ಅಧಿಕಾರಕ್ಕೆ ಬಂದ ಬಳಿಕ ವಸತಿ ಯೋಜನೆಯಲ್ಲಿನ ಎಲ್ಲಾ ಅವ್ಯವಹಾರಗಳ ವಿರುದ್ಧ ಕ್ರಮಕೈಗೊಳ್ಳುವ ಕೆಲಸ ಮಾಡಿದ್ದೇನೆ ಎಂದರು.
ಪ್ರಸ್ತುತ ಉಳಿದುಕೊಂಡಿರುವ ೯ ಲಕ್ಷ ಮನೆಗಳ ಪೈಕಿ ೬ ಲಕ್ಷ ಮನೆಗಳನ್ನು ಪ್ರಥಮ ಹಂತದಲ್ಲಿ ವಿವಿಧ ಯೋಜನೆಗಳ ಮೂಲಕ ತೆಗೆದುಕೊಂಡಿದ್ದೇವೆ. ಉಳಿದ ಮೂರು ಲಕ್ಷ ಮನೆಗಳನ್ನು ಮಾರ್ಚ್ ಬಳಿಕ ಕೈಗೆತ್ತಿಕೊಂಡು ಪರಿಶೀಲನೆ ಆರಂಭಿಸಲಾಗುತ್ತದೆ. ದ.ಕ., ಉತ್ತರ ಕನ್ನಡ ಭಾಗದಲ್ಲಿ ವಸತಿ ಯೋಜನೆಯಲ್ಲಿ ಹೆಚ್ಚಿನ ಅವ್ಯವಹಾರ ನಡೆಯದೇ ಇರುವುದು ಹೆಮ್ಮೆಯ ಸಂಗತಿ ಎಂದರು.
ಹಿಂದಿನ ಸರಕಾರದ ಅವಧಿಯಲ್ಲಿ ಒಂದು ಅಡಿ ಜಾಗವನ್ನೂ ತೆಗೆದುಕೊಳ್ಳದೆ ೧ ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರದಿಂದ ೧ ಸಾವಿರ ಕೋ.ರೂ. ಬಿಡುಗಡೆ ಮಾಡಲಾಗಿತ್ತು. ಆಗ ದ.ಕ.ಜಿಲ್ಲೆಯವರೇ ವಸತಿ ಸಚಿವರಾಗಿದ್ದು, ಪ್ರಸ್ತುತ ಅದಕ್ಕೆ ೩೩೦ ಎಕರೆ ಜಾಗ ತೆಗೆದುಕೊಂಡು ೪೭ ಸಾವಿರ ಮನೆಗಳನ್ನು ಕಟ್ಟುತ್ತಿದ್ದೇವೆ. ಬಿಎಸ್‌ವೈ ಅವರು ಸಿಎಂ ಆದ ಬಳಿಕ ಒಂದೂ ಮನೆ ಕೊಟ್ಟಿಲ್ಲ ಎಂಬ ಕೂಗು ಇದ್ದು, ಒಟ್ಟು ೧೦ ಲಕ್ಷ ಮನೆಗಳ ಗುರಿ ಇದೆ. ಕೇಂದ್ರ ಸಚಿವರು ಕೂಡ ವಿಶೇಷವಾಗಿ ಒಂದೂವರೆ ಲಕ್ಷ ಮನೆಗಳನ್ನು ಕೊಡುವುದಕ್ಕೆ ತಿಳಿಸಿದ್ದಾರೆ ಎಂದರು. ರಾಜ್ಯದ ೨೪೦೦ಕ್ಕೂ ಅಽಕ ಪ್ರದೇಶದಲ್ಲಿ ೮೫೦೦ಕ್ಕೂ ಅಧಿಕ ಎಕರೆ ಜಾಗದಲ್ಲಿ ಸ್ಲಮ್‌ಗಳಲ್ಲಿ ವಾಸಿಸುವ ೩.೧೨ ಲಕ್ಷ ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ,ಜಗನ್ನಾಥ ಬಂಗೇರ ನಿರ್ಮಲ್ ‌‌ಮೊದಲಾದವರಿದ್ದರು.

ಪ್ರತಿ ಗ್ರಾ.ಪಂ.ಗೆ ೫೦ ಮನೆಗಳು
ಬಂಟ್ವಾಳದಲ್ಲಿ ವಸತಿ ರಹಿತ ಹೆಚ್ಚಿನ ಕುಟುಂಬಗಳಿರುವ ಕಾರಣ ಶಾಸಕ ರಾಜೇಶ್ ನಾಯಕ್ ಅವರ ಮನವಿಯ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗೆ ೫೦ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ  ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *