ಬಂಟ್ವಾಳ :ಬಿ.ಸಿ.ರೋಡಿಗೆ ಸಮೀಪದ ಬೆಂಜನಪದವು ಗಣಿಗಾರಿಕೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಶುಕ್ರವಾರ ಹಠಾತ್ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದ್ದು, ಸ್ಥಳದಲ್ಲಿದ್ದ೨ ಟಿಪ್ಪರ್, ೧ ಹಿಟಾಚಿ, ೨ ದೊಡ್ಡ ಗಾತ್ರದ ಕಟ್ಟಿಂಗ್ ಮೆಶಿನ್, ೩ ಟಿಲ್ಲರ್ ಹಾಗೂ ಪರಿಕರಗಳನ್ನು ವಶ ಪಡಿಸಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದ ತಂಡ ಗಣಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್. ಮತ್ತಿತರರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವು ಪರಿಸರದಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರೇ ಖುದ್ದು ಈ ಹಠಾತ್ ದಾಳಿ ಕಾರ್ಯಾಚರಣೆಗಿಳಿದಿದ್ದಾರೆ.
ಕೆಲ ದಿನಗಳ ಹಿಂದೆ ಬಂಟ್ವಾಳ ತಹಶೀಲ್ದಾರ್ ಆಗಿದ್ದ ಅನಿತಾಲಕ್ಷ್ಮೀಯವರ ನಿಯೋಗ ಅಕ್ರಮ ಗಣಿಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ,ಅಕ್ರಮ ಗಣಿಕಾರಿಕೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತೆನ್ನಲಾಗಿದೆ. ಅವರ ವರದಿಯನ್ನಾಧರಿಸಿ ಜಿಲ್ಲಾಧಿಕಾರಿಯವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿದೆ.
