ಪೊಳಲಿ:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಕರಿಯಂಗಳ ಗ್ರಾಮದ ನಡುವೆ ಪಲ್ಘುಣಿ ನದಿಯ ತಟದಲ್ಲಿ ೮೦೦ ವರ್ಷಗಳ ಇತಿಹಾಸವುಳ್ಳ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಗುರುವಾರ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಶಿಲಾನ್ಯಾಸಗೈದರು.
ದೇವಾಲಯದ ಸಂಕ್ಷಿಪ್ತ ಇತಿಹಾಸ :
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಈಶಾನ್ಯಕ್ಕೆ ಹರಿಯುತ್ತಿರುವ ಫಲ್ಗುಣಿ ನದಿ ಪಕ್ಕದಲ್ಲಿ ಸುಮಾರು ೮೦೦-೧೦೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗೋಪಾಲಕೃಷ್ಣ ಮತ್ತು ಲಕ್ಷ್ಮೀ ನರಸಿಂಹ ದೇವರ ದೇವಳವು ವರ್ಷಗಳ ಹಿಂದೆ ಫಲ್ಗುಣಿ ನದಿ ಉಕ್ಕೇರಿ ಹರಿದಾಗ ಮೂರು ಬಾರಿ ಜಲಾವೃತಗೊಂಡಿತ್ತು. ಇಲ್ಲಿ ವರ್ಷಗಳ ಹಿಂದೆ ಈ ದೇವಾಲಯ ಮತ್ತು ಸುಮಾರು ೩,೫೦೦ ಎಕ್ರೆ ಜಾಗ ಜೈನರಲ್ಲಿದ್ದು, ಮುಂದೆ ಇಲ್ಲಿನ ಬ್ರಾಹ್ಮಣ ಕುಟುಂಬಿಕರಿಗೆ ಈ ಜಾಗ ಲಭಿಸಿತ್ತು. ತದನಂತರ ಬ್ರಿಟಿಷರ ಕಾಲದಲ್ಲಿ ಜಾರಿಯಾಗಿದ್ದ ಡಿಕ್ಲರೇಶನ್ ಕಾನೂನಿನಿಂದ ಇಲ್ಲಿನ ಹೆಚ್ಚಿನ ಜಾಗ ಊರವರಿಗೆ ಹಂಚಿ ಹೋಗಿದ್ದು, ಈಗ ದೇವಾಲಯಕ್ಕೆ ಸುಮಾರು ೧೦-೧೨ ಎಕ್ರೆ ಜಾಗ ಉಳಿದಿದೆ. ಈ ಜಾಗದಲ್ಲಿ ಸಣ್ಣ ಗುಡಿಯೊಂದು ಇದ್ದು ಇತ್ತೀಚೆಗೆ ಗಾಳಿಮಳೆಗೆ ಅದರ ಬಾಗಿಲು ಮುರಿದು ಬಿತ್ತು. ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಮಾಲಕರು ಜೋತಿಷಿಗಳ ಮೂಲಕ ತಾಂಬೂಲ ಪ್ರಶ್ನಾ ಚಿಂತನೆ ಇಡಲಾಗಿ, ದೇವಸ್ಥಾನದ ಮರುನಿರ್ಮಾಣಕ್ಕೆ ಸೂಚನೆ ಸಿಕ್ಕಿತ್ತು. ಅದರಂತೆ ಈಗ ಜಾಗದ ಮಾಲಕರು, ಬಂಧುಗಳು, ಊರವರು ಒಗ್ಗೂಡಿ ದೇವಸ್ಥಾನ ಮರುನಿರ್ಮಾಣಕ್ಕೆ ಮುಂದಾಗಿ, ಜ. ೭ರಂದು ದೇವಾಲಯಕ್ಕೆ ಶಿಲಾನ್ಯಾಸ ನಡೆಸಲಾಯಿತು.
ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕ್ಷೇತ್ರದ ಮೊಕ್ತೇಸರ ವಿಷ್ಣುಮೂರ್ತಿ ಭಟ್,ಜೀರ್ಣೋರ್ದ್ಧರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ರಾವ್ ಪಲ್ಲಿಪಾಡಿ, ಅಧ್ಯಕ್ಷ ಭಾಸ್ಕರ ಭಟ್ ಗಂಜಿಮಠ, ಉಪಾಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ ಹಾಗೂ ಮರದ ಶಿಲ್ಪಿಗಳಾದ ಗಣೇಶ್ ಆಚಾರ್ಯ ಪೊಳಲಿ, ಲಕ್ಷ್ಮಣ ಶರ್ಮ , ಗುತ್ತಿಗೆದಾರ ಜಯಪ್ರಕಾಶ್, ಇಂಜಿನೀಯರ್ ರಾಮು ಮೋಹನ್ ಗಜಂತೋಡಿ ಇದ್ದರು.
ಗೌರವ ಸಲಹೆಗಾರರಾದ ಬಾಲಕೃಷ್ಣ ರಾವು ನೂಯಿ,ಅಣ್ಣಯ್ಯ ಮಾಸ್ಟರ್ ,ವಿಶ್ವೇಶ್ವರ ಭಟ್ ಪೊಳಲಿ, ವಿವೇಕ್ ಪ್ರಭು, ಕಾರ್ಯದರ್ಶಿನಾಗರಾಜ್ ಭಟ್,ಕೋಶಾಧಿಕಾರಿ ರಾಜು ಕೋಟ್ಯಾನ್ ಪಲ್ಲಿಪಾಡಿ, ಜೊತೆಕಾರ್ಯದರ್ಶಿ ಗುಣಪಾಲ ಶೆಟ್ಟಿ, ಜೊತೆಕೋಶಾಧಿಕಾರಿ ಮೋಹನ್ ಶೆಟ್ಟಿ ಪಲ್ಲಿಪಾಡಿ ಮತ್ತು ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

