ಬಂಟ್ವಾಳ:ಕುಡಿಯುವ ನೀರಿನ ಜೊತೆಗೆ ಬೀಸುವ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಎದುರಾಗಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫೈರೋಝ್ ಗೂಡಿನಬಳಿ ವ್ಯಂಗ್ಯವಾಡಿ ಗಮನ ಸೆಳೆದರು. ಬಂಟ್ವಾಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿಗೆ ಸಾವಿರಾರು ರೂಪಾಯಿ ಬಿಲ್ ಬರುತ್ತಿರುವ ಬಗ್ಗೆ ವ್ಯಂಗ್ಯ ಮಾಡುವ ಮೂಲಕ ಅವರು ಗಂಭೀರ ಆರೋಪ ಮಾಡಿದರು.
ಗೂಡಿನಬಳಿ ಪರಿಸರದಲ್ಲಿ ಹಲವು ಮನೆಗಳಿಗೆ ವಿದ್ಯುತ್ ಬಿಲ್ ಗಿಂತ ಹೆಚ್ಚು ನೀರಿನ ಬಿಲ್ ಬರುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸಮಗ್ರ ಕುಡಿಯುವ ನೀರಿನ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿಯಲ್ಲಿ ವಿಚಾರಿಸಿದರೆ, ಕೆಲವೊಮ್ಮೆ ಗಾಳಿ ಬರುವಾಗ ಮೀಟರ್ ಓಡಾಟ ಜಾಸ್ತಿಯಾಗಿ ಈ ರೀತಿಯಾಗುತ್ತಿದೆ ಎಂಬ ಉಡಾಫೆ ಹಾಗೂ ಬೇಜವಾಬ್ದಾರಿ ಉತ್ತರ ಬರುತ್ತಿದೆ ಎಂದು ಆರೋಪಿಸಿದರು. ಜನರು ಬಳಸಿದ ನೀರಿಗೆ ಮಾತ್ರ ಬಿಲ್ ಪಾವತಿಸುತ್ತಿದ್ದರು. ಇದೀಗ ನೀರಿನ ಜೊತೆ ಬೀಸಿದ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಇದೆ ಎಂದು ಝೀನತ್ ಫೈರೋಝ್ ಸಭೆಯ ಗಮನ ಸೆಳೆದರು. ಈ ಸಂದರ್ಭ ಉತ್ತರಿಸಿದ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮಿ, ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯರೆಲ್ಲರೂ ಪಕ್ಷ ಬೇಧ ಮರೆತು ಪ್ರತೀ ವಾರ್ಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆರೋಪಗಳನ್ನು ಮಾಡಿದರು. ಸಮಗ್ರ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ಪುರಸಭೆಗೆ ಹಸ್ತಾಂತರವಾಗುವವರೆಗೆ ಪ್ರತೀ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಬಾರದಂತೆ ಪುರಸಭೆಯ ಅಧಿಕಾರಿಗಳು ಇರುವ ಕೊಳವೆ ಬಾವಿ, ಹಳೆ ಪೈಪ್ ಲೈನ್ಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಹಸೈನಾರ್, ಲುಕ್ಮಾನ್, ಅಬೂಬಕ್ಕರ್ ಸಿದ್ದೀಕ್, ವಾಸು ಪೂಜಾರಿ,, ಗಂಗಾಧರ, ಗೋವಿಂದ ಪ್ರಭು, ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಜನಾರ್ದನ ಚೆಂಡ್ತಿಮಾರ್ ಆಗ್ರಹಿಸಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಶರೀಫ್, ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳ ಅವಧಿ ನೀಡುತ್ತಿದ್ದು ಮುಂದಿನ ಸಾಮಾನ್ಯ ಸಭೆಗೆ ಮುಂಚಿತವಾಗಿ ಪುರಸಭೆಯ ಯಾವೆಲ್ಲ ವಾರ್ಡ್ಗಳಲ್ಲಿ ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಜಂಟಿ ಸರ್ವೇ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಂಡು ಸಭೆಗೆ ವಿವರಿಸಬೇಕು ಎಂದು ಸೂಚಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
