ಬಂಟ್ವಾಳ:ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ರೂ ೬.೭೫ಲಕ್ಷ ವೆಚ್ಚದಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ಉಚಿತ ‘ಶೈತ್ಯಾಗಾರ’ಕ್ಕೆ ಸಮಾಜ ಸೇವೆ ಬಗ್ಗೆ ನೈಜ ಕಾಳಜಿ ಹೊಂದಿರುವ ಲಯನ್ಸ್ ಕ್ಲಬ್ ಸದಸ್ಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ್ರಾಂತೀಯ ಅಧ್ಯಕ್ಷ ಬಿ.ಸಂಜೀವ ಶೆಟ್ಟಿ ಹೇಳಿದ್ದಾರೆ.ಇಲ್ಲಿನ ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಪ್ರಾಂತೀಯ ಮತ್ತು ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಬ್ಬಿನ ಅಧ್ಯಕ್ಷ ಜಾನ್ ಸಿರಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಸಹಿತ ಕನ್ನಡ ಮಾಧ್ಯಮ ಶಾಲೆ ಮತ್ತು ವೃದ್ಧಾಶ್ರಮಗಳಿಗೆ ರೂ ೩೮ಸಾವಿರ ಮೊತ್ತದ ವಿವಿಧ ಜನೋಪಯೋಗಿ ಪರಿಕರ ಒದಗಿಸಲಾಗಿದೆ ಎಂದರು. ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ, ಸಮಾಜಮುಖಿ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ, ವಲಯ ೨ರ ಅಧ್ಯಕ್ಷ ಮನೋರಂಜನ್ ಶುಭ ಹಾರೈಸಿದರು.ಇದೇ ವೇಳೆ ಶೈತ್ಯಾಗಾರಕ್ಕೆ ರೂ ೨೫ ಸಾವಿರ ಮೊತ್ತದ ದೇಣಿಗೆ ಹಸ್ತಾಂತರಿಸಲಾಯಿತು. ಕ್ಲಬ್ಬಿನ ಕಾರ್ಯದರ್ಶಿ ಪ್ರಿನೀತ್ ರಾಡ್ರಿಗಸ್ ವರದಿ ವಾಚಿಸಿದರು. ಅಧ್ಯಕ್ಷ ಜಾನ್ ಸಿರಿಲ್ ಡಿಸೋಜ ಸ್ವಾಗತಿಸಿ, ಚಾಲ್ಸ್ಲ್ ಮಾರ್ಟಿ ಸ್ ವಂದಿಸಿದರು.
