ಬಂಟ್ವಾಳ: ಸಕಲ ಸೌಕರ್ಯವನ್ನೊಳಗೊಂಡ ಬಂಟ್ವಾಳ ನಗರ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯಕೇಂದ್ರಕ್ಕೆ ಬಹುದಿನದ ಬೇಡಿಕೆಯಲ್ಲೊಂದಾದ ಶೈತ್ಯಾಗಾರದ ವ್ಯವಸ್ಥೆಯು ಈಡೇರುವ ಕಾಲ ಸನ್ನಿಹಿತವಾಗಿದೆ. ನ.29 ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ನಡೆಯುವ ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತ್ಯ -2 ರ ಸಮ್ಮೇಳನ “ಪುನರ್ ಜನ್ಮ” ದ ನೆನಪಿಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ಯೋಜನೆಯಡಿ ಎರಡು ಶೈತ್ಯಾಗಾರವನ್ನು ಕೊಡುಗೆಯಾಗಿ ಸಮರ್ಪಿಸಲಾಗುತ್ತಿದೆ ಎಂದು ಕ್ಲಬ್ ನ ಪ್ರಾಂತ್ಯಧ್ಯಕ್ಷ ಲ.ಸಂಜೀವ ಬಿ.ಶೆಟ್ಟಿ ಅವರು ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಜನತೆ ಹಾಗೂ ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡು ಸುಮಾರು 6.50 ಲಕ್ಷ ರೂ.ವೆಚ್ಚದಲ್ಲಿ 4 ಶೈತ್ಯಾಗಾರವನ್ನು ಸಮರ್ಪಿಸಲು ಉದ್ದೇಶಿಸಲಾಗಿತ್ತು.ಸದ್ಯ ಎರಡನ್ನು ಒದಗಿಸಲಾಗುತ್ತಿದೆ ಎಂದ ಅವರು ಮುಂದಿನ ಫೆಬ್ರವರಿ 14 ರಂದು ನಡೆಯುವ ಪ್ರಾಂತೀಯ ಸಮೇಳನದ ಬಳಿಕ ಮತ್ತೆರಡು ಶೈತ್ಯಾಗಾರವನ್ನು ಒದಗಿಸಲಾಗುವುದು ಹಾಗೆಯೇ ಇನ್ನೆರಡನ್ನು ವಾಮದಪದವು ಸ.ಆ.ಕೇಂದ್ರ ಅಥವಾ ಅಗತ್ಯವಿರುವ ಸ.ಆ.ಕೇಂದ್ರಕ್ಕೆ ಒದಗಿಸುವ ಚಿಂತನೆಯು ಇದೆ ಎಂದು ಎಂದು ಅವರು ತಿಳಿಸಿದ್ದಾರೆ. ಶೈತ್ಯಾಗಾರ ಸಮರ್ಪಣಾ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಜಿಲ್ಲೆ 317 ರ ಗವರ್ನರ್ ಲ.ಡಾ.ಗೀತಪ್ರಕಾಶ್ ಎ.,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಮಾಜಿ ಸಚಿವ ರಮಾನಾಥ ರೈ,ಮಾಜಿ ಲಯನ್ಸ್ ಗವರ್ನರ್ ಹರಿಕೃಷ್ಣಪುನರೂರು,ತಹಶೀಲ್ದಾರ್ ರಶ್ಮೀ ಎಸ್.ಆರ್.,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅತಿಥಿಯಾಗಿ ಭಾಗವಹಿಸುವರು.
ಪ್ರಥಮ ಉಪರಾಜ್ಯಪಾಲ ಲ.ವಸಂತಕುಮಾರ್ ಶೆಟ್ಟಿ,ದ್ವಿತೀಯ ಉಪರಾಜ್ಯಪಾಲರಾದ ಲ.ಎಸ್.ಸಂಜೀತ್ ಶೆಟ್ಟಿ,ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ಕೃಷ್ಣಶ್ಯಾಮ್ ಗೌರವ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.ಬಳಿಕ ಪುನರ್ ಜನ್ಮ ಪ್ರಾಂತೀಯ ಸಮ್ಮೇಳನ ನಡೆಯಲಿದ್ದು,ಎರಡು ಬಾರಿ ನಡೆದ ಬೀಕರ ರಸ್ತೆ ಅಪಘಾತದಲ್ಲಿಯೂ ಪವಾಡಸದೃಶವಾಗಿ ಬದುಕುಳಿದ ಹಿನ್ನಲೆಯಲ್ಲಿ ಸಮ್ಮೇಳನಕ್ಕೆ ಪುನರ್ ಜನ್ಮ ಎಂದು ಹೆಸರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಸತೀಶ್ ಕುಡ್ವ, ಕಾರ್ಯದರ್ಶಿ ಮಧ್ವರಾಜ್ ಬಿ ಕಲ್ಮಾಡಿ,ಕೋಶಾಧಿಕಾರಿ ಸುನೀಲ್,ಯೋಜನೆಯ ಸಂಯೋಜಕ ಉಮೇಶ್ ಆಚಾರ್,ವಲಯಾಧ್ಯಕ್ಷ ಮನೋರಂಜನ್ ಕೆ.ಆರ್ ,ಕಾರ್ಯಕ್ರಮ ಸಂಯೋಜಕ ಶಿವಾನಂದ ಬಾಳಿಗಾ, ಜಯಂತ್ ಶೆಟ್ಟಿ ಮೊದಲಾದವರಿದ್ದರು.

