ಬಂಟ್ವಾಳ : ಕೊರೋನದ ಹಣ ಬಂದಿದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೋರ್ವರ ಚಿನ್ನ ಎಗರಿಸಿ ಪರಾರಿಯಾಗಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಮಿನಿವಿಧಾನ ಸೌಧದಲ್ಲಿ ನಡೆದಿದೆ. ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಅಪರಿಚಿತನ ಬಣ್ಣದ ಮಾತು ನಂಬಿ ಮೋಸ ಹೋದ ಮಹಿಳೆ.
ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸಿ ವಾಪಸ್ ಬರುತ್ತಿದ್ದ ಜಯಂತಿ ಅವರಲ್ಲಿ ಅಪರಿಚಿತ ವ್ಯಕ್ತಿ, ತಾನು ಶೀನಪ್ಪ ಅವರ ಮಗ ಸಂತೋಷ್ ಎಂದು ಪರಿಚಯ ಮಾಡಿದ್ದಾನೆ. ಬಳಿಕ ಆತ ನಿಮಗೆ ಕೊರೋನದಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ ಎಂದು ನಂಬಿಸಿದ್ದಾನೆ ಎನ್ನಲಾಗಿದೆ.
ಕೊರೋನದ ಹಣ ಪಡೆಯಲು ಕನಿಷ್ಠ ಹತ್ತು ಸಾವಿರ ರೂಪಾಯಿ ಪಾವತಿಸಬೇಕು ಎಂದು ಹೇಳಿದ್ದಲ್ಲದೆ ಅರ್ಜಿ ತುಂಬಿಸಲೆಂದು ಮಹಿಳೆಯನ್ನು ಮಿನಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಮತ್ತೆ ಹಣ ಕೇಳಿದ್ದು ಈ ವೇಳೆ ಮಹಿಳೆ ನನ್ನಲ್ಲಿ ಇಲ್ಲ. ಮಗನಿಗೆ ಕರೆ ಮಾಡಿ ಹಣ ಇದೆಯಾ ಕೇಳುತ್ತೇನೆ ಎಂದಿದ್ದಾರೆ. ಈ ವೇಳೆ ಆತ, ಮಗನಿಗೆ ನಾನು ಆಗಲೇ ಕರೆ ಮಾಡಿ ಕೇಳಿದ್ದು ಆತ ಇಲ್ಲ ಎಂದಿದ್ದಾನೆ. ತಾಯಿಯಲ್ಲೂ ಹಣ ಇಲ್ಲದಿದ್ದರೆ ಅವರಲ್ಲಿ ಚಿನ್ನ ಕೇಳಿ ತೆಗೆಯುವಂತೆ ಹೇಳಿದ್ದಾನೆ ಎಂದು ಹೇಳಿ ಅಪರಿಚಿತ ಮಹಿಳೆಯನ್ನು ನಂಬಿಸಿದ್ದಾನೆ.
ಅಪರಿಚಿತನ ಮಾತನ್ನು ನಂಬಿದ ಮಹಿಳೆ ಕಿವಿಯಲ್ಲಿದ್ದ ಬೆಂಡೋಲೆ ತೆಗೆದು ಕೊಟ್ಟಿದ್ದಾರೆ. ಚಿನ್ನ ಪಡೆದ ವ್ಯಕ್ತಿ ನೀವು ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ಹೋದವನು ಅಲ್ಲಿಂದ ಪರಾರಿಯಾಗಿದ್ದಾನೆ. ಕೊನೆಗೆ ಮಹಿಳೆ ಮಿನಿವಿಧಾನ ಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಾನು ಮೋಸ ಹೋಗಿರುವುದು ಅರಿವಾಗಿದೆ. ಸ್ಥಳಕ್ಕೆ ಬಂದ ಮಹಿಳೆಯ ಮಗ ತಾಯಿಯನ್ನು ಬಂಟ್ವಾಳ ನಗರ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ. ಮಿನಿ ವಿಧಾನ ಸೌಧದಲ್ಲಿರುವ ಸಿ.ಸಿ.ಕ್ಯಾಮರಾದಲ್ಲಿ ಆರೋಪಿಯ ಪತ್ತೆ ಕಾರ್ಯ ಪೊಲೀಸರು ಮುಂದುವರಿದಿದೆ.
