ಬಂಟ್ವಾಳ: ದುಷ್ಕರ್ಮಿಗಳಿಂದ ಮಾರಣಾಂತಿಕ ವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರಂಗಿಪೇಟೆ ಕೊಟ್ಟಿಂಜ ನಿವಾಸಿ ಛಾಯಾ ಗ್ರಾಹಕ, ಪುದು ಬಿಜೆಪಿ ಮಹಾಶಕ್ರಿಕೇಂದ್ರದ ಸಾಮಾಜಿಕ ಜಾಲತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ಚಿಕಿತ್ಸೆಗೆ ಸರಕಾರ 5 ಲಕ್ಷ ರೂ.ವನ್ನು ಘೋಷಿಸಿದೆ. 
ನ.5 ರಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಅಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಸೆಎಂ ಬಿ.ಎಸ್ ವೈ ಅವರು ಗಾಯಾಳು ದಿನೇಶ್ ಶೆಟ್ಟಿ ಅವರ ಚಿಕಿತ್ಸೆಗೆ ಐದು ಲಕ್ಷ ರೂ.ವನ್ನು ಪ್ರಕಟಿಸಿದ್ದಾರೆ. ಈಚೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆ ನೆರವಿಗಾಗಿ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂ.ಆರ್ಥಿಕ ನೆರವು ನೀಡಿದ್ದರು.
ಅ.28 ರಂದು ಬುಧವಾರ ರಾತ್ರಿ 7.30 ಸುಮಾರಿಗೆ ಪುದು ಗ್ರಾಮದ ಕೊಟ್ಟಿಂಜೆ ನಿವಾಸಿ ದಿನೇಶ್ ಶೆಟ್ಟಿ ಅವರ ಫರಂಗಿಪೇಟೆ ಸ್ಟುಡಿಯೋ ಕ್ಕೆ ನಾಲ್ಕು ಮಂದಿ ನುಗ್ಗಿ ತಲೆ ಹಾಗೂ ಹೊಟ್ಟೆಗೆ ಗಂಭೀರವಾಗಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು.ಘಟನೆಯಿಂದ ಗಂಭೀರ ಗಾಯಗೊಂಡ ದಿನೇಶ್ ಶೆಟ್ಟಿ ಅವರು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದಿನೇಶ್ ಅವರ ಚಿಕಿತ್ಸೆಗೆ ಐದು ಲಕ್ಷ ರೂ.ಪ್ರಕಟಿಸಿದ ಸಿಎಂ ಬಿಎಸ್ ವೈ,ಸಹಕರಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಪುದು ಮಹಾಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ,ಜಿಪಂ ಸದಸ್ಯ ರವೀಂದ್ರ ಕಂಬಳಿಕೃತಜ್ಞತೆ ಸಲ್ಲಿಸಿದ್ದಾರೆ.
