ಬಂಟ್ವಾಳ: ಹೊಂಡ ಗುಂಡಿಗಳು ತುಂಬಿರುವ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನವೆಂಬರ್ 9ರಿಂದ ಡಾಮಾರೀಕರಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಮುಚ್ಚುವಂತೆ ಆಗ್ರಹಿಸಿ ನ.5ರಂದು ಹೆದ್ದಾರಿ ತಡೆ ಚಳವಳಿ ನಡೆಸಲು ಎಸ್.ಡಿ.ಪಿ.ಐ. ತೀರ್ಮಾನಿಸಿತ್ತು.

ಈ ಸಂದರ್ಭ ನಗರ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆ ಹರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ನಮ್ಮ ಜೊತೆ ಚರ್ಚೆ ನಡೆಸಲು ಅವಕಾಶ ಮಾಡಲಾಗುವುದು ಎಂದು ಮಾತು ಕೊಟ್ಟಿದ್ದರು.ಅದರಂತೆ ಹೆದ್ದಾರಿ ತಡೆ ಚಳವಳಿಯನ್ನು ಆ ದಿನ ಕೈ ಬಿಟ್ಟಿತ್ತು.
ಅದರಂತೆ ಶುಕ್ರವಾರ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿ ಸಭೆ ಆಯೋಜಿಸಲಾಗಿತ್ತಾದರೂ ,ತಹಶೀಲ್ದಾರರ ಗೈರಿನಿಂದಾಗಿ ಮಿನಿವಿಧಾನಸೌಧದ ಹೊರಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸೋಮವಾರದಿಂದಲೇ (ನ. 9) ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು. ಈ ಹಿನ್ನಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ನಡೆಸಲು ಉದ್ದೇಶಿಸಿದ್ದ ಹೆದ್ದಾರಿ ತಡೆ ಚಳವಳಿಯನ್ನು ಕೈ ಬಿಡಲಾಗಿದೆ ಎಂದು ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ಮಾಧ್ಯಮಪ್ರತಿನಿಧಿಗಳಿಗೆ ತಿಳಿಸಿದರು.ಸೋಮವಾರದಿಂದ ಕಾಮಗಾರಿ ಆರಂಭಿಸದಿದ್ದರೆ ಕಲ್ಲಡ್ಕದಿಂದ ಪಾಣೆಮಂಗಳೂರು ವರೆಗೆ ಜಾಥ ನಡೆಸಿ ಪಾಣೆಮಂಗಳೂರಿನಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಗಳಾದ ಅನಿರುದ್ದ್, ನಾಸಿರ್, ಬಂಟ್ವಾಳ ನಗರ ಠಾಣೆಯ ಎಸ್ಸೈ ಅವಿನಾಶ್, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಪ್ರಮುಖರಾದ ಮಾಲಿಕ್ ಕೊಳಕೆ, ಸತ್ತಾರ್ ಕಲ್ಲಡ್ಕ, ಇಕ್ಬಾಲ್ ನಂದರಬೆಟ್ಟು, ಉಬೈದ್ ಬಂಟ್ವಾಳ, ರವೂಫ್ ಕಲಾಯಿ, ಫೈಝಲ್ ಮಂಚಿ ಉಪಸ್ಥಿತರಿದ್ದರು.
