ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯ ಬಲವರ್ಧನೆ, ಖಾಸಗಿ ಆಸ್ಪತ್ರೆಯ ನಿಯಂತ್ರಣವನ್ನು ಮಾಡುವಂತೆ ಒತ್ತಾಯಿಸಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯಿಂದ ಶಾಸಕರು ಹಾಗೂ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಸಾಮೂಹಿಕ ಧರಣಿ ನಡೆಯಿತು.

ab77b63a-e1bc-486f-a064-a71e5eb1bbe6
ಡಿವೈಎಫ್‍ಐ ದ.ಕ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಉತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡುವುದಕ್ಕಿಂತ ತಮ್ಮ ಆರ್ಥಿಕ ಸುಧಾರಣೆಯತ್ತ ಹೆಚ್ಚು ಗಮನಹರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಲವು ನಿಯಮಗಳಿದ್ದರೂ ಅದು ಪಾಲನೆಯಾಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯನ್ನು ಸುಧಾರಣೆ ಮಾಡುವ ಬದಲು ಖಾಸಗಿ ಆಸ್ಪತ್ರೆಯವರ ಎದುರು ಮಂಡಿಯೂರಿದ್ದಾರೆ.

ಇದರಿಂದ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದ್ದು, ಮಧ್ಯಮ, ಬಡವರ್ಗದ ಜನರು ತಮ್ಮ ಹಕ್ಕು ಆಗಿರುವ ಆರೋಗ್ಯ ಸೇವೆಯನ್ನು ಪಡೆಯಲು ಹೆಣಗಾಡುವಂತಾಗಿದೆ. ರಾಜ್ಯ ಸರ್ಕಾರವು ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕು. ವೆನ್‍ಲಾಕ್ ಅನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ತಾಲೂಕಾಗಿರುವ ಮೂಡುಬದಿರೆಯಲ್ಲಿ ತಾಲೂಕು ಆಸ್ಪತ್ರೆ ಶೀಘ್ರ ಮಂಜೂರು ಆಗಬೇಕೆಂದು ಒತ್ತಾಯಿಸಿದರು.ಹೋರಾಟದ ಪ್ರಮುಖರಾದ ಯಾದವ ಶೆಟ್ಟಿ, ಸುಭಾಶ್ಚಂದ್ರ , ಬಾಲಕೃಷ್ಣ ಶೆಟ್ಟಿ, ಆಲ್ವಿನ್ ಮೆನೇಜಸ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *