ಬಂಟ್ವಾಳ: ಮಾಜಿ ಗೇಣಿದಾರರು ತಾವಿಂದು ಭೂಮಿಯ ಒಡೆಯರಾಗಲು ಮಾಜಿ ಪ್ರದಾನಿ ದಿವಂಗತ ಇಂದಿರಾಗಾಂಧಿ, ದಿ.ದೇವರಾಜ ಅರಸ್ ಹಾಗೂ ಕಾಂಗ್ರೆಸ್ ಪಕ್ಷ ಸವಾಲುಗಳನ್ನು ಎದುರಿಸಿ ಭೂಮಸೂದೆ ಜಾರಿಗೊಳಿಸಿದ್ದೇ ಕಾರಣ ಎಂಬುದನ್ನು ಮರೆಯಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಶನಿವಾರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್  ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ  ಬಿ. ಸಿ .ರೋಡ್ ನ ರಂಗೋಲಿ ಸಭಾಂಗಣದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರ ಪುಣ್ಯ ಸ್ಮರಣೆಯ ಪ್ರಯುಕ್ತ ನಡೆದ “ಮಾಜಿ ಗೇಣಿದಾರರ ಸಮಾವೇಶ” ವನ್ನು ಉದ್ಘಾಟಿಸಿ  ಮಾತನಾಡಿದ ಅವರು ದಿವಂಗತ ಇಂದಿರಾ ಗಾಂಧಿಯವರು ದೇಶದಜನರು ಒಪ್ಪುವ ರೀತಿಯಲ್ಲಿ ಆಡಳಿತ ನಡೆಸಿದ್ದರು ಎಂದರು.
IMG-20201031-WA0032
ಅಂದು ಭೂಮಸೂದೆ ವಿರೋಧಿಸಿದ್ದ ಸಣ್ಣಪುಟ್ಟ ರಾಜಕೀಯ ಪಕ್ಷಗಳು ಒಟ್ಟಾಗಿ ಇಂದು ಆಡಳಿತ ನಡೆಸುವ ಪಕ್ಷವಾಗಿದೆ ಎಂದು ಟೀಕಿಸಿದ ರೈ, ತುರ್ತುಪರಿಸ್ಥಿತಿಯಿಂದ ಬಡವರಿಗೆ ಅನ್ಯಾಯವಾಗಿಲ್ಲ. ದುರ್ಬಲ ವರ್ಗದವರು ಜೈಲಿಗೆ ಹೋಗಿಲ್ಲ. ಅಂದು ಬಡಜನರ ಪರ ಕಾನೂನು ರೂಪಿಸಲಾಗಿತ್ತು. ಇಂದು ಬಿಜೆಪಿಗೆ ಭೂಮಸೂದೆ ಕುರಿತು ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ಹೇಳಿದರು. ಇಂದಿರಾಗಾಂಧಿ ಅವರ ಯೋಜನೆಗಳಿಂದ ಲಾಭಪಡೆದುಕೊಂಡವರೇ ಅವರ ವಿರುದ್ದ ಬೊಬ್ಬೆಹಾಕುತ್ತಿದ್ದಾರೆ. ದೇಶದ ಏಕತೆ ಹಾಗೂ ಸಾರ್ವಭೌಮತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿರಾಗಾಂಧಿಯವರ ಸಾಧನೆ, ಕೊಡುಗೆಗಳು ಸದಾ ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ  ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿ ಕಿರಣ್ ಪುಣಚ ಅವರು ಪ್ರಮುಖ ಭಾಷಣಗೈದು, ದೇಶದ ಗ್ರಾಮೀಣ ಬದುಕು,ಕೃಷಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಯುವ ಜನಾಂಗ ಮುಂದಾಗಬೇಕು ಎಂದು ಹೇಳಿದರು. ಯುದ್ದ,ತುರ್ತಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಸುಗ್ರೀವಾಜ್ಞೆ ಜಾರಿಮಾಡುವ ಅವಕಾಶವನ್ನು ದುರುಪಯೋಗಪಡಿಸಿ,ಎಪಿಎಂಸಿ,ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡುವ ಮೂಲಕ ಸರಕಾರ ಜನವಿರೋಧಿ ನೀತಿ ಅನುಸರಿಸಿದೆ ಎಂದರು.
ಎಪಿಎಂಸಿಯಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಬೇಕೇ ಹೊರತು ಅದನ್ನು ಮುಚ್ಚುವ ಕೆಲಸ ಆಗಬಾರದು,ಕೃಷಿಮಾರುಕಟ್ಟೆಯಲ್ಲಿ ಬಂಡವಾಳಶಾಹಿಯವರಿಗೆ ಅವಕಾಶ ಒದಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.    ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ ಎಸ್ ಮೊಹಮ್ಮದ್,  ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ  ಮಲ್ಲಿಕಾ ವಿ ಶೆಟ್ಟಿ, ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ,  ಗೇರು ನಿಗಮದ ಮಾಜಿ ಅಧ್ಯಕ್ಷ   ಬಿ ಎಚ್ ಖಾದರ್, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ ವೇದಿಕೆಯಲ್ಲಿದ್ದರು. ಬಂಟ್ವಾಳ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಜಗದೀಶ್  ಕೊಯಿಲ,ಬಾಲಕೃಷ್ಣ ಶೆಟ್ಟಿ ಕೋಡಾಜೆ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *