ಮಂಗಳೂರು:ಗುರುಪುರ ಪೊಂಪೈ ಮಾತೆಯ ದೇವಾಲಯದ ಶತಮಾನೋತ್ಸವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ನ. ೪ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಧರ್ಮಗುರು ಫಾ.ಆ್ಯಂಟನಿ ಲೋಬೊ ಹೇಳಿದರು.ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಭ್ರಮ ಬಲಿಪೂಜೆಯೊಂದಿಗೆ, ಬಾವುಟ ಆರೋಹಣಗೈದು, ಶತಮಾನೋತ್ಸವದ ಲಾಂಛನ ಅನಾವರಣ ಮಾಡಿ ಉದ್ಘಾಟನೆ ಮಾಡಲಿದ್ದಾರೆ ಇದರ ಜತೆಗೆ ನಾನಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. ಶತಮಾನೋತ್ಸವದ ಸ್ಮರಣಾರ್ಥವಾಗಿ ದೇವಾಲಯದ ಗಂಟೆಯ ಗೋಪುರದ ನಿರ್ಮಾಣ, ದೇವಾಲಯದ ಕಟ್ಟಡ ದುರಸ್ತಿ, ಇಂಟರ್‌ಲಾಕ್ಸ್ ಅಳವಡಿಕೆ, ಚಾರಿತ್ರಿಕ ಪವಿತ್ರ ಶಿಲುಬೆಯ ದುರಸ್ತಿ ಮುಂತಾದ ಹಲವಾರು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ೨೦೨೧ರಲ್ಲಿ ನ.೭ರಂದು ಸಂಜೆ ೪ ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಡಾ.ಪೀಟರ್ ಪಾವ್ಲ್ ಸಲ್ಡಾನ ಅಧ್ಯಕ್ಷತೆಯಲ್ಲಿ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ಹಾಗೂ ಶತಮಾನೋತ್ಸವ ಸಂಭ್ರಮ ನೆರವೇರಲಿದೆ. ಈ ಸಂದರ್ಭ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭ ಚರ್ಚಿನ ಉಪಾಧ್ಯಕ್ಷ ರಿಚರ್ಡ್ ಫರ್ನಾಂಡೀಸ್, ಕಾರ್ಯದರ್ಶಿ ಜೆರಾಲ್ಡ್ ಲೋಬೋ, ಸದಸ್ಯರಾದ ಜೈಸನ್ ಸಿಕ್ವೇರಾ, ಪ್ರವೀಣ್ ಲೋಬೋ ಉಪಸ್ಥಿತರಿದ್ದರು.
