ಬಂಟ್ವಾಳ :ಫರಂಗಿಪೇಟೆಯಲ್ಲಿರುವ ತೃಷಾ ಸ್ಟುಡಿಯೋಕ್ಕೆ ನುಗ್ಗಿ ಮಾಲಕ,ಬಿಜೆಪಿ ಮುಖಂಡ ದಿನೇಶ್ ಶೆಟ್ಡಿ ಅವರ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಫರಂಗೀಪೇಟೆ ಸಮೀಪದ ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19),ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಪುದ್ದೀನ್(22),ಸವಾದ್ (20) ಬಂಧಿತ ಆರೋಪಿಗಳಾಗಿದ್ದಾರೆ. ರಾತ್ರಿ ಸುಮಾರು 7-15 ರ ಹೊತ್ತಿಗೆ ನಾಲ್ವರು ಯುವಕರು ಪೋಟೊ ತೆಗೆಸುವಂತೆ ಸ್ಟುಡಿಯೋಗೆ ಬಂದಿದ್ದರು.ಈ ಪೈಕಿ ಒರ್ವಾತ ಏಕಾಏಕಿ ದಿನೇಶ್ ಶೆಟ್ಟಿಯನ್ನು ಕೊಲ್ಲುವ ಉದ್ದೇಶದಿಂದ ತಲವಾರು ದಾಳಿ ನಡೆಸಿದ್ದಾನೆ.
ಈ ಸಂದರ್ಭ ಸ್ಟುಡಿಯೋದಲ್ಲಿದ್ದ ದಿನೇಶ್ ಅವರ ಸ್ನೇಹಿತ ಶೇಖರ ಪುಇಜಾರಿ ಎಂಬವರು ಅಪಾಯದ ಅರಿವಾಗಿ ತಕ್ಷಣ ಅಲ್ಲಿದ್ದ ಕುರ್ಚಿಯಿಂದ ಇಬ್ಬರು ಆರೋಪಿಗಳತ್ತ ಬೀಸಿದಾಗ ಅವರಿಗೂ ಹಲ್ಲೆ ನಡೆಸಲಾಗಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಗಾಯಾಳು ದಿನೇಶರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ರವರು ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದರು.ಇದೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ. ಘಟನೆಯ ಬಗ್ಗೆ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪುಟೇಜ್ ಆಧರಿಸಿ ಆರೋಪಿಗಳ ಬಂಧನ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು.ರಾತ್ರಿ ವೇಳೆ ಆರೋಪಿಗಳ ಮನೆಗೂ ಪೊಲೀಸರು ದಾಳಿ ನಡೆಸಿ ಶೋಧಿಸಿದ್ದರು.
ನಂತರ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀಪ್ರಸಾದ್ , ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಂಡನೆ: ಬಿಜೆಪಿ ಮುಖಂಡ ದಿನೇಶ್ ಶೆಟ್ಟಿ ಕೊಲೆ ಯತ್ನ ಘಟನೆಯನ್ನು ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ,ಪುದು ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಜಿಪಂ ಸದಸ್ಯ ರವೀಂದ್ರಕಂಬಳಿ ತೀವ್ರವಾಗಿ ಖಂಡಿಸಿದ್ದು,ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡಸುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
