ಕುಪ್ಪೆಪದವು:ಕಳೆದ ನಾಲ್ಕು ವರ್ಷಗಳಿಂದ ವಿದ್ಯುತ್ ಕಾಣದೆ ಚಿಮಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಇಲ್ಲಿನ ಕೊರಗ ಜನಾಂಗದ ಎರಡು ಮನೆಗಳಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಶಾಸಕ ದಾ. ಭರತ್ ಶೆಟ್ಟಿ ಅವರು ಶನಿವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಕ್ಕೆರಿ ಎಂಬಲ್ಲಿ ವಾಸವಿರುವ ಲೀಲಾ ಎಂಬವರ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಸರಕಾರದಿಂದ ಎರಡು ಮನೆಗಳನ್ನು ನಿರ್ಮಿಸಲಾಗಿತ್ತು, ಆದರೆ ಲೀಲಾ ಅವರ ಜಾಗ ಮಕ್ಕಳ ಜಂಟೀ ಹೆಸರಲ್ಲಿದ್ದ ಕಾರಣದಿಂದ ಭೂಪರಿವರ್ತನೆಯಾಗದೆ, ಪಂಚಾಯತ್ ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾಗಿದ್ದ ನಿರಾಕ್ಷೇಪಣಾ ಪತ್ರ ನೀಡಿರಲಿಲ್ಲ ಈ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಸ್ಥಳೀಯಮುಖಂಡರು ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮತ್ತು ಶಾಸಕ ಭರತ್ ಶೆಟ್ಟಿ ಅವರ ಗಮನಕ್ಕೆ ತಂದಿದ್ದು, ಕುಪ್ಪೆಪದವು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯ ಮತ್ತು ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ ಅವರ ಮೂಲಕ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಂಡು ಎರಡೂ ಮನೆಗಳಲ್ಲಿ ವಿದ್ಯುತ್ ಬೆಳಗುವಂತೆ ಮಾಡಿದ್ದಾರೆ. ಜಗದೀಶ್ ಕುಲಾಲ್ ಪಾಕಜೆ ಅವರು ಎರಡೂ ಮನೆಗಳಿಗೆ ಉಚಿತವಾಗಿ ವಿದ್ಯುದೀಕರಣ ಕಾಮಗಾರಿಯನ್ನು ಮಾಡಿಕೊಟ್ಟಿದ್ದು, ಸ್ವತಃ ಶಾಸಕರೇ ವಿದ್ಯುತ್ ಸಂಪರ್ಕದ ವೆಚ್ಚ ವನ್ನು ಭರಿಸಿದ್ದಾರೆ.
ಶಾಸಕರು ವಿದ್ಯುತ್ ದೀಪ ಬೆಳಗಿಸಿ ಶುಭ ಹಾರೈಸಿದರು. ಶ್ರೀಮತಿ ಲೀಲಾ ಮತ್ತು ಮಕ್ಕಳು, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ,ಉತ್ತರ ಮಂಡಲ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಅಶೋಕ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಯ್ಕ್, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ. ಕುಪ್ಪೆಪದವು ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ ಉಳಿಪಾಡಿ, ಜತೆ ಕಾರ್ಯದರ್ಶಿ ಅಶೋಕ್ ಕಟ್ಟೆಮಾರ್ ಮೊದಲಾದವರು ಈ ಸಂಧರ್ಭದಲ್ಲಿ ಹಾಜರಿದ್ದರು.ಗಣೇಶ್ ಪಾಕಜೆ ಸ್ವಾಗತಿಸಿ ನಿರೂಪಿಸಿದರು.
