ಬಿಲ್ಲವ ಸಮಾಜದ ‘ಸುವರ್ಣ’ಯುಗಕ್ಕೆ ನಾಂದಿಯಾಗಿದ್ದ ಜಯಣ್ಣ
ಜಯ ಸಿ ಸುವರ್ಣ ಬಿಲ್ಲವರ ಹೊರತಾಗಿ ಅನ್ಯ ಸಮಾಜದಿಂದ ‘ಜಯಣ್ಣ’ ಎಂದೇ ಗೌರವಿಸಲ್ಪಡುತ್ತಿದ್ದ ವ್ಯಕ್ತಿ. ಅದಕ್ಕೆ ಅವರಲ್ಲಿ ಮನೆ ಮಾಡಿಕೊಂಡಿದ್ದ ಸಂಘಟನಾ ಸಾಮರ್ಥ್ಯ, ಔದಾರ್ಯ, ಸಹಕಾರ ಮನೋಭಾವ, ಸ್ನೇಹಪರ ನಿಲುವು ಮುಖ್ಯ ಕಾರಣ. ಶ್ರೀ ನಾರಾಯಣ ಗುರುವಿನ ತತ್ವಾದರ್ಶಗಳಿಂದ ಪ್ರೇರಿತರಾಗಿದ್ದ ಸಮಾಜಜೀವಿ ಸುವರ್ಣ. ಅವರು ಹೊಂದಿದ್ದ ಅಧಿಕಾರಸ್ಥ ಹುದ್ದೆಗಳಿಗಿಂತಲೂ ಹೆಚ್ಚಾಗಿ, ಜನರ ಮೇಲಿಟ್ಟ ಪ್ರೀತಿ ಇಂದು ಅವರ ಬಗ್ಗೆ ಮಾತನಾಡುವಂತಾಗಿದೆ.
ಒಂದೊಮ್ಮೆ, ಮನಸ್ಸು ಮಾಡಿದ್ದರೆ, ಅಂದರೆ ರಾಜಕೀಯಕ್ಕೆ ಇಳಿಯುತ್ತಿದ್ದರೆ ಸಂಸತ್ ಸದಸ್ಯರಾಗಿಗುತ್ತಿದ್ದರು ಎಂಬುದು ಅತಿಶಯೋಕ್ತಿಯಲ್ಲ. ಆದರೆ, ಸಮಾಜಜೀವಿಯಾಗಿ ಜನರೊಂದಿಗೆ ಬೆರೆತ್ತಿದ್ದ ಅವರೆಂದೂ ರಾಜಕೀಯದ ಮೇಲೆ ಒಲವು ಹರಿಸಿದವರಲ್ಲ !ಸುವರ್ಣರು ೧೯೯೦ರವರೆಗೂ ಸಂಘಟನೆಗಳ ಹೊರಗಿದ್ದು, ಸಂಘಟಕರಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದರು. ೧೯೯೦ರಲ್ಲಿ ಮುಂಬೈಯಲ್ಲಿ ಹುಟ್ಟಿಕೊಂಡಿದ್ದ ಬಿಲ್ಲವರ ಅಸೋಸಿಯೇಶನ್ ಆಡಳಿತ ಕುಸಿಯುವ ಹಂತದಲ್ಲಿದ್ದಾಗ, ಉನ್ನತ ಮಟ್ಟಕ್ಕೇರಿಸುವಲ್ಲಿ ಭುಜ ಕೊಟ್ಟಿದ್ದ ಮೊದಲಿಗ ಜಯ ಸುವರ್ಣರಾಗಿದ್ದರು. ಬಳಿಕ ಇವರಿಗೆ ಅನೇಕರು ಸಹಕಾರ ನೀಡಿದ್ದು ಇತಿಹಾಸ. ಅಲ್ಲಿಂದ ಮುಂದಕ್ಕೆ ಸುವರ್ಣ ಹಾಗೂ ಅವರ ಬಳಗ ಅಸೋಸಿಯೇಶನ್ ಚುನಾವಣೆಯಲ್ಲಿ ಗೆದ್ದು, ಸಂಘಕ್ಕೆ ಹೊಸ ದಿಕ್ಕು ನೀಡಿತು. ಅಸೋಸಿಯೇಶನ್‌ನ ಅಧ್ಯಕ್ಷರೂ ಆದರು. ಅವರು ೧೯೯೧ರಿಂದ ೨೦೦೭ರವರೆಗೆ ಅಸೋಸಿಯೇಶನ್ ನೇತಾರ ಆಗಿ ಬಿಲ್ಲವ ಸಮುದಾಯಕ್ಕೆ ಹೊಸ ಆಶಾಕಿರಣವಾಗಿದ್ದರು ಮತ್ತು ಸಂಘಟನೆಯೊಳಗಿನ ಹೊಸಬರಿಗೆ ದಾರಿದೀಪವಾಗಿದ್ದರು. ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿ ಹೆಸರುವಾಸಿಯಾಗಿದ್ದರು.
ಬಿಲ್ಲವರ ಸಾಧನೆಗಳು ಸಮಾಜಕ್ಕೆ ತಲುಪಬೇಕಿದ್ದರೆ ಅದಕ್ಕೊಂದು ಸೂಕ್ತ ಮಾಧ್ಯಮ ಬೇಕೆಂದುಕೊಂಡಿದ್ದವರಲ್ಲಿ ಸುವರ್ಣರೂ ಒಬ್ಬರು. ೧೯೮೮ರಲ್ಲಿ ಉದಯಿಸಿದ್ದ ಬಿಲ್ಲವರ ಮುಖವಾಣಿ ‘ಅಕ್ಷಯ’ ಮಾಸ ಪತ್ರಿಕೆ ಸುವರ್ಣರ ಆಡಳಿತಾವಧಿಯಲ್ಲಿ ಹೊಸ ಲುಕ್ ಕಂಡಿತು. ಮಾಸಿಕದ ಪುಟಗಳು ಹೆಚ್ಚಿದಂತೆ ಚಂದಾದಾರರು ಹಾಗೂ ಓದುಗರ ಸಂಖ್ಯೆಯೂ ಅಸಂಖ್ಯಗೊಂಡಿತು. ಬಿಲ್ಲವ ಸಾಹಿತ್ಯ ಮನಸ್ಸುಗಳಿಗೆ `ಅಕ್ಷಯ’ ವಿಶಿಷ್ಟ ವೇದಿಕೆಯಾಯಿತು.ಮುಂಬೈಯ ಬಿಲ್ಲವರ ಅಸೋಸಿಯೇಶನ್‌ಗೆ ಸಾಂತಾಕ್ರೂಸ್‌ನಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಉತ್ಕಟ ಛಲ ಹೊಂದಿದ್ದ ಸುವರ್ಣರು, ೧೯೯೧ರ ಬಳಿಕ ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದರು. ಕೇಂದ್ರದ ಮಾಜಿ ಮಂತ್ರಿ ಜನಾರ್ದನ ಪೂಜಾರಿಯವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಸೋಸಿಯೇಶನ್‌ಗೆ ಜಾಗ ಒದಗಿಸುವಂತೆ ಮಾಡಿದ್ದರು. ೧೯೯೫ ಎಪ್ರಿಲ್ ೧೬ರಂದು ನೂತನ ಕಟ್ಟಡ ಉದ್ಘಾಟನೆಗೊಂಡಿತು.
ಬಿಲ್ಲವರ ಅಸೋಸಿಯೇಶನ್ ಪ್ರಾಯೋಜಿತ ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನ ಪ್ರಥಮ ಅಧ್ಯಕ್ಷರಾಗುವ ಹೊತ್ತಿಗೆ ಬ್ಯಾಂಕ್ ಕೇವಲ ಐದು ಶಾಖೆ ಹೊಂದಿತ್ತು. ಸುವರ್ಣರ ದೂರಗಾಮಿ ಯೋಜನೆಯ ಪ್ರಕಾರವೇ ಮುಂಬೈ ಕೇಂದ್ರೀಕೃತ ಬ್ಯಾಂಕ್ ಮಹಾರಾಷ್ಟ್ರ ಹೊರತುಪಡಿಸಿ, ಕರ್ನಾಟಕ ಮತ್ತು ಗುಜರಾತಿನಲ್ಲಿ ತನ್ನ ಶಾಖೆ ತೆರೆಯಿತು ಮತ್ತು ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಚ್ಚುಗಾರಿಕೆ ಪ್ರತಿಷ್ಠಾಪಿಸಿತು. ಸದ್ಯ ನೂರಕ್ಕೂ ಹೆಚ್ಚು ಶಾಖೆ ಹೊಂದಿರುವ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಶೆಡ್ಯೂಲ್ ಬ್ಯಾಂಕ್ ಸಾಲಿನಲ್ಲಿ ಮುಂಚೂಣಿಯಲ್ಲಿದೆ.
ಸುವರ್ಣರು ಬಿಲ್ಲವ ಸಮಾಜದ ಸಂಘಟನೆಯೊಂದಿಗೆ, ಸಮಾಜದ ಅಭಿವೃದ್ಧಿಗಾಗಿ ಅನೇಕ ದೂರದೃಷ್ಟಿ ಯೋಜನೆ ಹೊಂದಿದ್ದರು. ಹಣಕಾಸು ವ್ಯವಹಾರಕ್ಕಾಗಿ ಬ್ಯಾಂಕ್, ಸಾಹಿತ್ಯಿಕ ಅಭಿರುಚಿಗಾಗಿ ಅಕ್ಷಯ, ಯಕ್ಷಗಾನ ಆಸಕ್ತರಿಗೆ ಬಿಲ್ಲವರಿಂದ ಉದಯಿಸಿದ್ದ ಶ್ರೀ ಗುರುನಾರಾಯಣ ಯಕ್ಷಗಾನ ಕಲಾ ಮಂಡಳಿಯ ಬೆಳವಣಿಗೆ ಕಾರಣೀಕರ್ತರಾಗಿದ್ದ ಸುವರ್ಣರು, ಬಿಲ್ಲವರ ಶೈಕ್ಷಣಿಕ ಶ್ರೇಯೋಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದರು.
……..
ಬಿಲ್ಲವರ ಸಮಾಜದ ಶಿರೋಮಣಿಯಂತಿದ್ದ ಜಯ ಸಿ ಸುವರ್ಣರು ಅ. ೨೦ ಮುಂಬೈಯಲ್ಲಿ ನಿಧನ ಹೊಂದಿದ ಸುದ್ದಿ, ಅಭಿವೃದ್ಧಿಶೀಲ ಬಿಲ್ಲವ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಬಿಲ್ಲವರ ಅಸೋಸಿಯೇಶನ್ ಮುಂಬೈ, ಬಿಲ್ಲವರ ಮಹಾಮಂಡಲದ ಮಾಜಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷರಾಗಿದ್ದ ಸುವರ್ಣರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜೊತೆಗೆ ಸಮಾಜಸೇವಾ ಧುರೀಣ, ಶತಮಾನದ ಶ್ರೇಷ್ಠ ಸಮಾಜ ಸೇವಕ, ಭಾರತ್ ಕರ್ಮಯೋಗಿ, ಶ್ರೀಕೃಷ್ಣ ಕೃಪಾ ಪಾತ್ರ, ಉದ್ಯೋಗ ರತ್ನ, ಸಮಾಜರತ್ನ, ಗುರು ಚೈತನ್ಯ, ಜನಮನದ ನಾಯಕ ಮೊದಲಾದ ಬಿರುದುಗಳಿಗೆ ಪಾತ್ರರಾಗಿರುವ ಇವರು ಬಿಲ್ಲವರ ಸಮಾಜದ ಹೊರತಾಗಿ ಎಲ್ಲ ಜಾತಿ-ವರ್ಗದ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಎಲ್ಲಕ್ಕೂ ಮಿಗಿಲಾಗಿ, ಜಯ ಸುವರ್ಣರು ವಿವಿಧ ಮಜಲುಗಳಲ್ಲಿ ಬಿಲ್ಲವ ಸಮಾಜ ತನ್ನದೇ ಆದ ಅಸ್ತಿತ್ವದೊಂದಿಗೆ ಎಲ್ಲೆಡೆಯೂ ಗುರುತಿಸುವಂತಾಗಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿದ್ದರು.
-ಬರೆಹ : ಧನಂಜಯ ಗುರುಪುರ