ಪೂಂಜಾಲಕಟ್ಟೆ: ಪ್ರತಿಭಾವಂತರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ, ಗೌರವಿಸಿ, ಅಭಿನಂದಿಸುವುದು ಒಳ್ಳೆಯ ಕೆಲಸವಾಗಿದ್ದು, ಆ ರೀತಿ ಮಾಡುವುದರಿಂದ ಇತರೇ ವ್ಯಕ್ತಿ ಯಾ ವಿದ್ಯಾರ್ಥಿಗಳು ಸಾಧನೆ ಮಾಡುವುದಕ್ಕೆ ಪ್ರೇರಣೆ ಆಗಲಿದೆ ಎಂದು ಬೆಂಗಳೂರುನ ನಿವೃತ್ತ ಪೊಲೀಸ್ ಆಯುಕ್ತ ಜಿ.ಎ. ಬಾವಾ ಹೇಳಿದರು. ಅವರು ಅ. 18ರಂದು ಹಿದಾಯ ಫೌಂಡೇಶನ್ ಮಂಗಳೂರು ವತಿಯಿಂದ ಕಾವಳಕಟ್ಟೆಯಲ್ಲಿರುವ ಹಿದಾಯ ಶೇರ್ ಎಂಡ್ ಕೇರ್ ಕಾಲೋನಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕ ಯಾಕೂಬ್ ಕೆ. ಇವರ ಸನ್ಮಾನ ಮತ್ತು ಹಿದಾಯ ಶೇರ್ ಎಂಡ್ ಕೇರ್ ಕಾಲೋನಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಹಿದಾಯ ಫೌಂಡೇಶನ್ ಕಾಲೋನಿಯನ್ನು ನಿರ್ಮಿಸಿ ತೀರಾ ಸಂಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ, ಅವರಿಗೆ ಮನೆ ನಿರ್ಮಿಸಿ ಕೊಟ್ಟು, ಅವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ಗುರುತರವಾದ ಸೇವೆಯಾಗಿದ್ದು, ಸಂಸ್ಥೆ ಒಳ್ಳೆಯ ಉದ್ದೇಶದೊಂದಿಗೆ ಹಾಕಿಕೊಂಡಿರುವ ಮುಂದಿನ ಉದ್ದೇಶಿತ ಯೋಜನೆ ಯಶಸ್ವಿ ಆಗಲಿ ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್ ಮಾತನಾಡಿ ನಾವು ನಮ್ಮ ಸೇವೆಯಲ್ಲಿ ಗುರುತಿಸುವುದರ ಜೊತೆಗೆ ಇತರರಿಗೂ ಆಶಾದಾಯಕವಾದ ಸೇವಕರಾಗಬೇಕು, ಆಗ ಸಮಾಜ ನಮ್ಮನ್ನು ಗುರುತಿಸುತ್ತದೆ, ಜೊತೆಗೆ ಸಮಾಜದಲ್ಲಿ ಒಂದಿಷ್ಟು ಪರಿವರ್ತನೆ ಕಾಣಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕ ಯಾಕೂಬ್ ಕೆ. ಮಾತನಾಡಿ ನನ್ನ ಸಾಧನೆಯ ಹಿಂದೆ ತಂದೆ, ತಾಯಿ, ಗುರುಹಿರಿಯರ, ವಿದ್ಯಾರ್ಥಿಗಳ, ಊರವರ ಪಾಲು ಇದೆ, ಇವರೆಲ್ಲರ ಆಶೀರ್ವಾದದಿಂದ ನನಗೆ ಪ್ರಶಸ್ತಿ ಬಂದಿದ್ದು, ನನ್ನ ಪಾಲಿಗೆ ಇದು ನೋಬೆಲ್ ಪ್ರಶಸ್ತಿ ಆಗಿರುತ್ತದೆ ಎಂದು ಹೇಳಿದರು.ಹಿದಾಯ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೋನಿಯಲ್ಲಿ 49 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅದಾಗ್ಯೂ ವಿಶೇಷ ಮಕ್ಕಳ ಪಾಲನಾ ಕೇಂದ್ರವನ್ನು ಹೊಂದಿದ್ದು, ಮುಂದಿನ ದಿನಗಳನ್ನು ಇನ್ನಷ್ಟು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಬಿ. ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ, ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿ ಆಶಿಕಾ ಮಾತನಾಡಿದರು. ಉದ್ಯಮಿಗಳಾದ ಆಶಿಫ್ ಕರ್ನಿರೆ, ಶೌಕತ್, ಶರೀಫ್ ವೈಟ್‍ಸ್ಟೋನ್, ಅಬೂಬಕ್ಕರ್ ಸಿದ್ದಿಕ್, ಸಂಸ್ಥೆಯ ಕೋಶಾಧಿಕಾರಿ ಝಿಯಾವುದ್ದೀನ್ ಉಪಸ್ಥಿತರಿದ್ದರು. ಹಿದಾಯ ಫೌಂಡೇಶನ್‍ನ ಅಬ್ದುಲ್ ರಜಾಕ್ ಅನಂತಾಡಿ ಸ್ವಾಗತಿಸಿ, ಆದಿದ್ ಅಸ್ಕರ್ ವಂದಿಸಿದರು. ಬಿ. ಮಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
