ಬಂಟ್ವಾಳ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದೆ. ಇದೀಗ ಪ್ರಾಂತೀಯ ಸಮ್ಮೇಳನದ ಜೊತೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಉಚಿತ ‘ಶೈತ್ಯಾಗಾರ’ ಅಳವಡಿಸಲು ಮುಂದಾಗಿರುವುದು ಸ್ತುತ್ಯರ್ಹ ಎಂದು ಮೊಡಂಕಾಪು ಚಚ್೯ನ ಧರ್ಮಗುರು ವಲೇರಿಯನ್ ಡಿಸೋಜ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ಸಂಜೆ ನಡೆದ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನ ಮನವಿ ಪತ್ರ ಬಿಡುಗಡೆ ಮತ್ತು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆ ಶೈತ್ಯಾಗಾರ ನಿರ್ಮಾಣಕ್ಕೆ ರೂ 1.5 ಲಕ್ಷ ಮೊತ್ತದ ಮುಂಗಡ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಕೃಷ್ಣ ಶ್ಯಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಸಮ್ಮೇಳನಾಧ್ಯಕ್ಷ ಅಧ್ಯಕ್ಷ ಸತೀಶ್ ಕುಡ್ವ ಕಾರ್ಯಕ್ರಮ ಉದ್ಘಾಟಿಸಿದರು.
ಲಯನ್ಸ್ ಉಪ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಮಾಜಿ ರಾಜ್ಯಪಾಲ ದೇವದಾಸ ಭಂಡಾರಿ ಶುಭ ಹಾರೈಸಿದರು. ಇದೇ ವೇಳೆ ದಿವಂಗತ ಅನಂತಕೃಷ್ಣ ಮತ್ತು ಎಪ್ರಿಯಂ ಸಿಕ್ವೇರಾ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಮುಖರಾದ ಡಾ.ವೇಣುಗೋಪಾಲ್, ಜಗದೀಶ ಯಡಪಡಿತ್ತಾಯ, ವಾಲ್ಟರ್ ಡಿಸೋಜ, ಶ್ರೀನಿವಾಸ್ ಪೂಜಾರಿ, ಲಕ್ಷ್ಮಣ್ ಕುಲಾಲ್, ಉಮೇಶ ಆಚಾರ್ಯ ಮತ್ತಿತರರು ಇದ್ದರು.
ಡಾ.ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ.ಪ್ರಾಸ್ತಾವನೆಗೈದರು. ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಬಿ.ಸಿ.ರೋಡು ಸ್ವಾಗತಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ಮಧ್ವರಾಜ್ ಬಿ.ಕಲ್ಮಾಡಿ ಮತ್ತು ಕೋಶಾಧಿಕಾರಿ ಸುನಿಲ್ ಬಿ. ಕಾರ್ಯಕ್ರಮ ನಿರೂಪಿಸಿದರು.
