ಬಂಟ್ವಾಳ:ಕಳೆದ ಎರಡು ದಿನಗಳ ಹಿಂದೆ ಕುಸಿದು ಬಿದ್ದಿರುವ ಬಂಟ್ವಾಳ ತಾ.ನ ಇತಿಹಾಸ ಪ್ರಸಿದ್ದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆಯ ಪುನರ್ ನಿರ್ಮಾಣವನ್ನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದ್ದಾರೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಜತೆ ಮಾತನಾಡಿದ ಶಾಸಕರು ಶೀಘ್ರವೇ ತಜ್ಞರ ಸಲಹೆಯನ್ನು ಪಡೆಯಲಾಗುವುದು ಎಂದರು.
ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನದ ತಡೆಗೋಡೆಗೆ ಹಾನಿಯಾಗಿದೆ ಮುಂದಿನ ದಿನಗಳಲ್ಲಿ ಇದು ದೇವಸ್ಥಾನಕ್ಕೂ ಅಪಾಯ ಎದುರಾಗಬಹುದೆಂದು ಈ ಸಂದರ್ಭ ಗ್ರಾಮಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಽಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನದ ಪರಿಸರದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಭರವಸೆ ನೀಡಿದರು.

ತನ್ನ ಶಿಫಾರಸ್ಸಿನನ್ವಯ ತಾಲೂಕಿನಲ್ಲಿ ಕಾರಿಂಜ ದೇವಸ್ಥಾನ ಸಹಿತ ಈಗಾಗಲೇ ನಾಲ್ಕು ಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದ್ದು, ಕಾರಿಂಜ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಆಡಳಿತಾಧಿಕಾರಿ ನೋಣಯ್ಯ ನಾಯ್ಕ್, ಗ್ರಾಮಣಿಯರಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಅರ್ಚಕರಾದ ಜಯಶಂಕರ ಉಪಾಧ್ಯಾಯ, ಮಿಥುನ್ ರಾಜ್ ನಾವಡ, ಪ್ರಮುಖರಾದ ಮೋಹನ ಆಚಾರ್ಯ, ಚಿದಾನಂದ ರೈ, ಕೆ.ರಾಜಗೋಪಾಲ ನಾಯಕ್, ಸದಾಶಿವ ಪ್ರಭು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರವೀಣ ಪೂಜಾರಿ, ಸೂರ್ಯಹಾಸ ಆಚಾರ್ಯ, ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಚಂದ್ರಶೇಖರ ಶೆಟ್ಟಿ ಕ್ಷೇತ್ರ ಮಂಡಲ ಪ್ರ. ಕಾರ್ಯದರ್ಶಿಗಳಾದ ರವೀಶ ಶೆಟ್ಟಿ, ಡೊಂಬಯ್ಯ ಅರಳ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.
