ಬಂಟ್ವಾಳ: ಸಹಕಾರಿ ಸಂಘಗಳು ಇಂದು ರೈತರ ಹಿತಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಕೊರೋನ ಸಂಕಷ್ಟಗಳಿಂದ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದ್ದರೂ ದ.ಕ. ಜಿಲ್ಲೆಯ ಸಹಕಾರಿ ಸಂಘಗಳು ಯಾವುದೇ ಸಮಸ್ಯೆಗಳಿಲ್ಲದೆ ಸದೃಢವಾಗಿದೆ. ಇದಕ್ಕೆ ಸಹಕಾರಿ ಸಂಘಗಳನ್ನು ಕಟ್ಟಿರುವ ನಮ್ಮ ಹಿರಿಯರ ಮಾದರಿ ಕಾರ್ಯಗಳು ಕಾರಣವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.    ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೋ ಸಂತ ಅಂತೋನಿ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡ ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನೂತನ ಲೊರೆಟ್ಟೋ ನೂತನ ಶಾಖೆಯನ್ನು ಉದ್ಘಾಟಿಸಿ, ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.  1
ಪರಸ್ಪರ ಸಹಕಾರ ಮಾಡುವುದೇ ಸಹಕಾರಿ ಸಂಘದ ಉದ್ದೇಶವಾಗಿದ್ದು,ಸದಸ್ಯರು ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದರು.  ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು ಎಂಬುದು ನಮ್ಮ ಆಶಯ. ರಾಜಕೀಯ ರಹಿತವಾಗಿ ನಡೆಯಬೇಕಾದ ಸಹಕಾರಿ ಸಂಘಸಂಸ್ಥೆಗಳಲ್ಲಿ ಇಂದು ಇರುವಷ್ಟು ರಾಜಕೀಯ ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ  ಇದು ಖೇದಕರವಾಗಿದೆ ಎಂದರು.  ನಮ್ಮ ಸರಕಾರದ ಅವಧಿಯಲ್ಲಿ ಮೂರು ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಹತ್ತು ಲಕ್ಷ ರೂಪಾಯಿವರೆಗೆ ಕೇವಲ ಮೂರು ಶೇಕಡಾ ಬಡ್ಡಿ ದರದಲ್ಲಿ ಸಾಲವನ್ನು ನೀಡಿದ್ದು ಇದರಿಂದ ಸಂಕಷ್ಟದಲ್ಲಿದ್ದ ನಮ್ಮ ರೈತರಿಗೆ ಹೆಚ್ಚು ಪ್ರಯೋಜನವಾಗಿದೆ. ಇದು ನಮಗೂ ಖುಷಿ ನೀಡಿದೆ ಎಂದು ಅವರು ಹೇಳಿದರು. 6
ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ದೇಶದ ರೈತರ ಅಭೂತಪೂರ್ವ ಯಶಸ್ವಿಗೆ ಅಪಾರ ಕೊಡುಗೆಯನ್ನು ನೀಡಿರುವ ಸಹಕಾರಿ ಸಂಘಗಳಲ್ಲಿ ಹಸ್ತಕ್ಷೇಪ ನಡೆಯುತ್ತಿದೆ. ರಿಸರ್ವ್ ಬ್ಯಾಂಕ್ ಸಹಕಾರಿ ಸಂಘಗಳ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸ ನಡೆಯುತ್ತಿದ್ದು,  ಇದರಿಂದ ಸಹಕಾರಿ ಸಂಘಗಳು ಸಂಕಷ್ಟಗಳನ್ನು ಎದುರಿಸುವ ಅಪಾಯ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ, ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಯ್‌ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಎಲ್ಲಾ ಮಾಹಿತಿಗಳನ್ನೊಳಗೊಂಡ ವೆಬ್ ಸೈಟ್ ರಚಿಸುತ್ತಿದ್ದು ,ಶೀರ್ಘವೇ ಇದರ ಅನಾವರಣಗೊಳಿಸಲಾಗುವುದು. ಆಧುನಿಕ ತಂತ್ರಜ್ಞಾನ ಮತ್ತು ಹೊಸ ಚಿಂತನೆಯೊಂದಿಗೆ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕು. ಸಹಕಾರಿ ಸಂಘದಲ್ಲಿ ಮಂಗಳೂರು ವನ್ ಮಾದರಿಯಲ್ಲಿ ಮಲ್ಟಿ ಸರ್ವಿಸ್ ಸೆಂಟರ್ ತೆರೆಯುವ ಯೋಜನೆ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯರು ,ಸಿಬ್ಬಂದಿ ವರ್ಗ ಹಾಗೂ ಸಂಘದ ಎಲ್ಲ ಸದಸ್ಯರ ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿಯನ್ನು ಕಂಡಿದೆ. ನಮ್ಮ ಸಂಘವು ಬಿ.ಸಿ.ರೋಡು ಕೈಕಂಬದಲ್ಲಿ ನಿವೇಶನವನ್ನು ಹೊಂದಿದ್ದು ಶೀರ್ಘವೇ ಸ್ವಂತ ಕಟ್ಟಡ ನಿರ್ಮಿಸುವ ಯೋಚನೆ ಇದೆ ಎಂದು ತಿಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಅಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು.
ಲೊರೆಟ್ಟೊ ಚರ್ಚಿನ ಧರ್ಮ ಗುರು ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ಆಶಿರ್ವಚನ ನೀಡಿದರು. ಪುರಸಭಾ ಸದಸ್ಯ ವಾಸು ಪೂಜಾರಿ, ಯುವ ಉದ್ಯಮಿ ಅಹ್ಮದ್ ಬಾವ, ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ಅಜಯ್ ಕುಮಾರ್ ಅಜಿಲ, ಕಟ್ಟಡದ ಮಾಲಕಿ ಬೆನೆಡಿಕ್ಟ್ ಸಲ್ದಾನ್ಹಾ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಬೇಬಿ ಕುಂದರ್, ನ್ಯಾಯವಾದಿ ಸುರೇಶ್ ಶೆಟ್ಟಿ,ಸರಪಾಡಿ ವ್ಯ.ಸೇ.ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಶೆಟ್ಟಿ, ಸಂಘದ ನಿರ್ದೇಶಕರುಗಳಾದ ನರಸಿಂಹ ಹೊಳ್ಳ, ಪದ್ಮನಾಭ ರಾವ್, ಬಿ.ಸುರೇಶ್ ಭಂಡಾರಿ ಅರ್ಬಿ, ತೋಮಸ್ ಸಲ್ದಾನ್ಹಾ ಅನಿಲ್ ಪಿಂಟೊ, ಶಿವಪ್ರಸಾದ್ ಕನಪಾಡಿ, ರಮೇಶ್, ಪೂರ್ಣಿಮಾ ಕೆಂಪುಗುಡ್ಡೆ, ಲೋಸಿ ಡಿಸೋಜ, ಪೂರ್ಣಿಮಾ ಬೆದ್ರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಆಲ್ವಿನ್ ವಿನಯ್ ಲೋಬೋ ಸ್ವಾಗತಿಸಿದರು. ನಿರ್ದೇಶಕರಾದ ಕಮಲಾಕ್ಷ ವಂದಿಸಿದರು. ಸಂಘದ ಅಮ್ಟಾಡಿ ಶಾಖೆಯ ವ್ಯವಸ್ಥಾಪಕ ದಿನೇಶ್ ಅಮೀನ್ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *