ಗುರುಪುರ : ಈ ದೇಶ ಎಲ್ಲ ರೀತಿಯಲ್ಲೂ ಸ್ವಚ್ಛವಾಗಿರಬೇಕೆಂದು ಗಾಂಧೀಜಿಯವರು ಕನಸು ಕಂಡಿದ್ದರು. ಸ್ವಾತಂತ್ರ್ಯದ ಬಳಿಕ ಬಂದ ಸರ್ಕಾರಗಳು ಆ ಬಗ್ಗೆ ಗಮನಹರಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮಾತ್ರ ನಿಜವಾದ ಅರ್ಥದಲ್ಲಿ ಸ್ವಚ್ಛತೆಗೆ ಮಹತ್ವ ನೀಡಿದರು. ಈ ನಿಟ್ಟಿನಲ್ಲಿ ಅವರು ಸ್ವಚ್ಛ ಭಾರತ್ ಯೋಜನೆ ಜಾರಿಗೆ ತಂದು ಜನಜಾಗೃತಿ ಮೂಡಿಸಿದರು. ಭಾರತೀಯರೆಲ್ಲರೂ ಸ್ವಚ್ಚ ಪರಿಸರಕ್ಕೆ ಪಣ ತೊಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಕರೆ ನೀಡಿದರು.
ಮಂಗಳೂರು ನಗರ ಉತ್ತರ ಯುವ ಮೋರ್ಚಾ ಗಾಂಧಿ ಜಯಂತಿಯ(ಅ. 2) ಪ್ರಯುಕ್ತ ಗುರುಪುರ ಕೈಕಂಬದಲ್ಲಿ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ ಮಾತನಾಡಿ, ಕಳೆದ ಏಳು ದಶಕ ಆಡಳಿತದಲ್ಲಿದ್ದ ಸರ್ಕಾರಗಳು ಗಾಂಧೀಜಿಯವರ ಸ್ವರಾಜ್ಯ, ರಾಮರಾಜ್ಯ ಕನಸುಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಗಾಂಧೀಜಿ ಹೆಸರಲ್ಲಿ ಬರೇ ರಾಜಕೀಯ ನಡೆಸಿವೆ. ಪ್ರಧಾನಿ ಮೋದಿಯವರು ಗಾಂಧೀಜಿಯವರ ಕನಸಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ `ಸ್ವಚ್ಚ ಭಾರತ’ ಯೋಜನೆ ಕಾರ್ಯರೂಪಕ್ಕೆ ತಂದರು. ಇದರಲ್ಲಿ ಎಲ್ಲ ರಂಗದ ಸ್ವಚ್ಛತೆಯೊಂದಿಗೆ ದೇಶದ ಅಭಿವೃದ್ಧಿ ಮಂತ್ರ ಅಡಗಿದೆ ಎಂದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಉತ್ತರ ಮಂಡಲ ಅಧ್ಯಕ್ಷ ತಿಲಕ್‍ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಯುವ ಮೋರ್ಚಾ ಉತ್ತರ ಮಂಡಲ ಅಧ್ಯಕ್ಷ ಭರತ್‍ರಾಜ್ ಕೃಷ್ಣಾಪುರ, ಅಮೃತಲಾಲ್ ಡಿ’ಸೋಜ, ಪ್ರಧಾನ ಕಾರ್ಯದರ್ಶಿಗಳಾದ ಸಂಜೀತ್, ಜಿ. ಕೆ ಸಂದೇಶ್, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಗುರುಪುರ, ಶ್ರೀಕರ ಶೆಟ್ಟಿ, ರಾಜೇಶ್ ಶೆಟ್ಟಿ, ತಿಲಕ್ ಹಾಗೂ ಪಕ್ಷದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
