ಬಂಟ್ವಾಳ:  ದೈವದ ಪರಿಚಾರಕಾರನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೋರ್ವ ಸೊಂಟದಿಂದ ಕೆಳಭಾಗ ಬಲ ಕಳೆದುಕೊಂಡು ಕಳೆದ ಹತ್ತು ದಿನಗಳಿಂದ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಉಳಿದಿದ್ದಾರೆ.  ಕೈಯಲ್ಲಿ ಹಣವಿಲ್ಲದೆ, ಸರಿಯಾದ  ಚಿಕಿತ್ಸೆ ಪಡೆಯಲು ಸಾಧ್ಯವಾಗದೆ  ದಾನಿಗಳ ಸಹಾಯಕ್ಕಾಗಿ ಬಡ ಕುಟುಂಬ ಎದುರು ನೋಡುತ್ತಿದೆ.   ಸಜೀಪಮುನ್ನೂರು ಗ್ರಾಮದ ಶಾಂತಿನಗರ ನಿವಾಸಿ ಸುಶೀಲ ಎಂಬವರ ಪುತ್ರ ಶಶಿಧರ (೩೪) ಮಲಗಿದ್ದಲ್ಲೇ ಇರುವ ಯುವಕ.
ಮಡಿವಾಳ ಸಮುದಾಯಕ್ಕೆ ಸೇರಿದ ಶಶಿಧರ ಅವರು ನೇಮ, ಕೋಲೋತ್ಸವಗಳಲ್ಲಿ ದೈವಗಳಿಗೆ ಜೀಟಿಗೆ ಹಿಡಿಯುವ ಕಾಯಕವನ್ನು ಮಾಡುತ್ತಿದ್ದಾರೆ. ತಂದೆಯ ಮರಣ ನಂತರ ತಾಲೂಕಿನ ವಿವಿಧ ಭಾಗಗಳ ದೈವಸ್ಥಾನಗಳಲ್ಲಿ ಜೀಟಿಗೆ ಹಿಡಿಯುವ ಜೊತೆಗೆ ಪರಿಚಾರಕರಾಗಿ  ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ಸಮೀಪದ ದೈವಸ್ಥಾನವೊಂದರಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳಿದ ಇವರಿಗೆ ಜ್ವರ ಕಾಣಿಸಿಕೊಂಡು ಬಳಿಕ  ಕೈಕಾಲುಗಳಲ್ಲಿ ಬಲವೇ ಇಲ್ಲದಂತಾಗಿತ್ತು. ದಿನದಿಂದ ದಿನಕ್ಕೆ ಬಲಹೀನರಾದ ಶಶಿಧರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭವೇ ೭೫ ಸಾವಿರ ರೂಪಾಯಿ ಹಣ ಕಟ್ಟುವಂತೆ ಸೂಚಿಸಿದ ಹಿನ್ನಲೆಯಲ್ಲಿ ಇವರು ದಿಕ್ಕು ತೋಚದೆ ವಾಪಸ್ಸು ಮನೆಗೆ ಬಂದಿದ್ದಾರೆ. ದೇಹದಲ್ಲಿ ದಿನದಿಂದ ದಿನಕ್ಕೆ ನೋವು ಬಾಧಿಸುತ್ತಿದ್ದು ಆಸ್ಪತ್ರೆಗೆ ದಾಖಲಾಗಲು ದಾನಿಗಳ ನೆರವು ಎದುರು ನೋಡುತ್ತಿದ್ದಾರೆ.
ಶಾಂತಿ ನಗರದ ಸಣ್ಣ ಮನೆಯಲ್ಲಿ ಶಶಿಧರ ತನ್ನ ತಾಯಿಯೊಂದಿಗೆ. ಇಬ್ಬರೇ ಇರುವ ಈ   ಮನೆಗೆ ಆಧಾರವಾಗಬೇಕಿದ್ದ ಮಗ ಮಲಗಿದ್ದಲ್ಲೇ ಇದ್ದಾನೆ. ತಾಯಿ ಬೀಡಿ ಕಟ್ಟಿ ಬರುವ ಸಂಪಾದನೆ ಮನೆ ನಿಭಾಯಿಸಲು ಸಾಲುತ್ತಿಲ್ಲ. ಇನ್ನು ಚಿಕಿತ್ಸೆ ಕೊಡಿಸುವುದಾದರೂ ಹೇಗೆ ಎನ್ನುವ  ಈ ಸ್ಥಿತಿಯಲ್ಲಿ ಈ ಬಡಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ದಾನಿಗಳು ನೀಡುವ ಆರ್ಥಿಕ ಸಹಕಾರ ಮಗನ ಚಿಕಿತ್ಸೆಗಾಗಿ ಕಂಗೆಟ್ಟು ಕುಳಿತಿರುವ ತಾಯಿಗೆ ಆಸರೆಯಾಗಲಿದೆ.
ನೆರವು ನೀಡುವ ದಾನಿಗಳು ಸುಶೀಲ ಅವರ ಖಾತೆಗೆ ಹಣ ಜಮಾ ಮಾಡಬಹುದಾಗಿದೆ. ಅಥವಾ ಅವರ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ.
ಖಾತೆ ಸಂಖ್ಯೆ: ಸುಶೀಲ,  ೦೧೩೫೨೨೧೦೦೧೦೦೩೦ ಸಿಂಡಿಕೇಟ್ ಬ್ಯಾಂಕ್ ಐಎಫೆಸ್ಸಿ ಕೋಡ್: Sಙಓಃ೦೦೦೦೧೩೫
ದೂರವಾಣಿ ಸಂಖ್ಯೆ: ೯೯೦೦೭೧೩೩೭೯

By suddi9

Leave a Reply

Your email address will not be published. Required fields are marked *