ಬಂಟ್ವಾಳ: ಹೃದಯ ಸಂಬಂಧಿ ರೋಗಿಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ವಿನಂತಿಯ ಮೇರೆಗೆ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಅವರ ಮಾರ್ಗದರ್ಶನದಲ್ಲಿ ಕ್ಯಾಡ್ ಪೌಂಡೇಶನ್ ವತಿಯಿಂದ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಸಹಿತ ಮೂರು ಪ್ರಾ.ಆ. ಕೇಂದ್ರಗಳಿಗೆ ಸೇರಿ ಒಟ್ಟು 5 ಇಸಿಜಿ ಯಂತ್ರವನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. 
ಮಂಗಳವಾರ ಬಂಟ್ವಾಳ ಸಮುದಾಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಇಸಿಜಿ ಯಂತ್ರವನ್ನು ಆಸ್ಪತ್ರೆ ವೈದ್ಯಾಧಿಕಾರಿಯವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಶಾಸಕರು, ಬಂಟ್ವಾಳ ತಾಲೂಕಿಗೆ ಒಟ್ಟು 17 ಇಸಿಜಿ ಯಂತ್ರಗಳನ್ನು ನೀಡಿರುವ ಕ್ಯಾಡ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಈಗಾಗಲೇ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ನೀಡಿರುವ ಭರವಸೆಯಂತೆ ಎರಡು ಡಯಾಲಿಸಿಸ್ ಯಂತ್ರ ವಾರದೊಳಗೆ ಪೂರೈಕೆಯಾಗಲಿದೆ, ಮುಂದಿನದಿನಗಳಲ್ಲಿಈ ಆರೋಗ್ಯ ಕೇಂದ್ರಕ್ಕೆ ಸಕಲ ಸೌಕರ್ಯವನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದರು.
ಐದು ಇಸಿಜಿ ಯಂತ್ರಗಳಲ್ಲಿ 2 ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಉಳಿದಂತೆ ಅಳಿಕೆ ,ಮಂಚಿ,ಪುಂಜಾಲಕಟ್ಟೆ ಪ್ರಾ. ಆ.ಕೇ.ಕ್ಕೆ ತಲಾ ಒಂದರಂತೆ ಒದಗಿಸಲಾತ್ತದೆ ಎಂದು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು. ತಹಸೀಲ್ದಾರ್ ರಶ್ಮಿ ಎಸ್.ಆರ್, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಕ್ಯಾಡ್ ನ ಪರವಾಗಿ ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್, ಯಂತ್ರದ ತಂತ್ರಜ್ಞರಾದ ರಾಕೇಶ್, ಗುರುರಾಜ್ ರೈ ಉಪಸ್ಥಿತರಿದ್ದರು. ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಪುಷ್ಪಲತಾ ಆಸ್ಪತ್ರೆಗೆ ಮಲ್ಟಿ ಪ್ಯಾರಮೀಟರ್, ಅನಸ್ತೇಶಿಯಾ ಯಂತ್ರಗಳ ಬೇಡಿಕೆ ಸಲ್ಲಿಸಿದರು. ತಾಲೂಕು ಆಸ್ಪತ್ರೆಯ ಸಿಬಂದಿ ಸುರೇಶ್ ಪರ್ಕಳ ಸ್ವಾಗತಿಸಿ,ವಂದಿಸಿದರು. ಇದೇ ವೇಳೆ 35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ-2020ಯನ್ವಯ ಮಾಹಿತಿ ಕಾರ್ಯಕ್ರಮ ನಡೆಯಿತು. .
