ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮದ, ದೈಕಿನಕಟ್ಟೆ ಎಂಬಲ್ಲಿರುವ ಭಾರತ್ ಪೆಟ್ರೋಲಿಯಂ ಕಂಪೆನಿಯ ಪೆಟ್ರೋಲ್ ಬಂಕ್ನ ಶಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮೇಜಿನ ಡ್ರಾಯರ್ ನಲ್ಲಿಟ್ಟಿದ್ದ ವ್ಯವಹಾರದ ನಗದನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ. 
ಶುಕ್ರವಾರ ಬೆಳಗ್ಗಿನ ಜಾವ 5.30 ರ ವೇಳೆಗೆ ಪೆಟ್ರೋಲ್ ಬಂಕ್ ನ ನೌಕರ ಕೆಲಸಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು,ತಕ್ಷಣ ಬಂಕ್ ನ ಮೆನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕಳ್ಳರು ಪೆಟ್ರೋಲ್ ಬಂಕ್ ನ ಶಟರ್ ನ ಬೀಗ ಮುರಿದು ಒಳಗಡೆ ಗಾಜನ್ನು ಒಡೆದು ಒಳನುಗ್ಗಿ ಮೇಜಿನ ಡ್ರಾಯರ್ ನಲ್ಲಿ ಎರಡು ಬ್ಯಾಗಿನಲ್ಲಿರಿಸಲಾಗಿದ್ದ ಗುರುವಾರ ಇಡೀದಿನ ನಡೆದ ವ್ಯವಹಾರದ ನಗದು ಹಣ 1,21,344 ರೂ.ವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಬಂಕ್ ನ ಮೆನೇಜರ್ ಮಹಮ್ಮದ್ ಶಕೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್.ಐ.ಸೌಮ್ಯ , ಇನ್ಸ್ ಪೆಕ್ಟರ್ ಸಂದೇಶ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಈ ಬಗ್ಗೆ ಬಂಕ್ ನ ಮೆನೇಜರ್ ಮಹಮ್ಮದ್ ಶಕೀಫ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು,ಮುಂದಿನ ತನಿಖೆ ನಡೆಸುತ್ತಿದ್ದಾರೆ.ಈ ಕುರಿತಂತೆ ಮಾಹಿತಿ ಇದ್ದವರು ಯಾರೋ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.
