ಬಂಟ್ವಾಳ: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಬಳಿ ಸೋಮವಾರ ಸಂಜೆ ದ್ವಿಚಕ್ರ ವಾಹನವೊಂದಕ್ಕೆ ಕಾರು ಡಿಕ್ಕಿ ಹೊಡೆದು ಗಭೀರಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಿ.ಸಿ.ರೋಡಿಗೆ ಸಮೀಪದ ಪಲ್ಲಮಜಲು ನಿವಾಸಿ ಪ್ರಕಾಶ್ ಆರ್‌.ಚೌಟ ಮೃತಪಟ್ಟವರಾಗಿದ್ದಾರೆ.

ಪಾಣೆಮಂಗಳೂರಿನಿಂದ ಬಿ.ಸಿ.ರೋಡಿಗೆ ತಮ್ಮ ಬೈಕ್ ನಲ್ಲಿ ಬರುತ್ತಿದ್ದ ವೇಳೆ ವೃತ್ತ ಬಳಿ ಹಿಂಬದಿಯಿಂದ ಅತೀವೇಗ ಹಾಗೂ ಅಜಾಗರುಕತೆಯಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿತ್ತು.ಪರಿಣಾಮ ರಸ್ತೆಗೆ ಬಿದ್ದು ಗಂಭೀರಗಾಯಗೊಂಡಿದ್ದ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಗಾಯಾಳು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ನಡುವೆ ಬಂಟ್ವಾಳ ಟ್ರಾಫಿಕ್ ಪೊಲೀಸರು ವೃತ್ತದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರದಲ್ಲಿ ಕಾರಿನ ನಂಬರನ್ನು  ಗುರುತಿಸಿ,ಮಂಗಳೂರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಘಾತವಲಯ:

ಬಿ.ಸಿ.ರೋಡಿನ ಈ ವೃತ್ತ ಇದೀಗ ಅಪಘಾತವಲಯದಂತಾಗಿದೆ.ನಾಲ್ಕು  ದಿಕ್ಕಿನಿಂದಲೂ ವಾಹನಗಳು ಧಾವಿಸಿ ಬರುತ್ತಿದ್ದು,ಇಲ್ಲಿ ಚಾಲಕರ ಒಮ್ಮಗೇ ಗೊಂದಲಕ್ಕೊಳಗಾಗುತ್ತಾರೆ.ಈಗಾಗಲೇ ವೃತ್ತದ ಪರಿಸರದಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು,ಸಾವು,ನೋವುಗಳು ಸಂಭವಿಸಿದೆ.ಇಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಮೂಲಕ ಅಪಘಾತವನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕೆಂಬ ಆಗ್ರಹ ಚಾಲಕ ಸಮುದಾಯದಿಂದ ಕೇಳಿಬಂದಿದೆ.

By suddi9

Leave a Reply

Your email address will not be published. Required fields are marked *