ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾದ `ವಿದ್ಯಾಗಮ” ನಿರಂತರ ಕಲಿಕಾ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ ನಾಯ್ಕ ಉದ್ಘಾಟಿಸಿದರು. ಪ್ರತಿ ಮಗುವಿನ ಭವಿಷ್ಯದ ಕನಸಿಗೆ ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ಇನ್ನಾವುದೇ ಅಡಚಣೆಗಳು ಅಡ್ಡಿಯಾಗದಂತೆ ನನಸಾಗವುದೆಂಬ ದೂರ ದೃಷ್ಠಿ ಹೊಂದಿರುವ ಈ ಯೋಜನೆಯು ಶಿಕ್ಷಣ ಇಲಾಖೆಯ ಅತ್ಯದ್ಭುತ ಯೋಜನೆಗಳಲ್ಲಿ ಒಂದು. ಇಂತಹ ಮಹತ್ವಪೂರ್ಣ ಯೋಜನೆಯನ್ನು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರ ಅವಿರತ ಪ್ರಯತ್ನದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ.
ನಿರಂತರ ಕಲಿಕೆಗೆ ಯಾವುದೇ ಭೌತಿಕ ಪರಿಸರ ಲಭ್ಯವಾಗದ ಈ ಹಂತದಲ್ಲಿ ಪ್ರತೀ ಮಗುವಿನ ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಕಾಲ್ಪನಿಕ ಕಲಿಕಾ ಕೋಣೆಗಳನ್ನು ಶಾಲೆಯ ನಾಲ್ಕೂ ದಿಕ್ಕುಗಳಲ್ಲಿ ಬಹಳ ಯಶಸ್ವಿಯಾಗಿ ಶಿಕ್ಷಕರ ತಂಡ ಇಲಾಖೆಯ ಈ ವಿದ್ಯಾಗಾಮ ಪರಿಕಲ್ಪನೆಯನ್ನು ಜಾರಿಗೊಳಿಸುತ್ತಿದೆ’ ಎಂದು ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಪ್ರಸ್ತಾವಿಸಿ ನುಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯ ಪದ್ಮಯ್ಯ ಗೌಡ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಭಾಗವಹಿಸಿದ್ದರು. ಶಿಕ್ಷಕಿಯರಾದ ಗೀತಾ ಸ್ವಾಗತಿಸಿದರು, ವಾಣಿ ವಂದಿಸಿದರು. ಲೀಲಾ ನಿರೂಪಿಸಿದರು.
