ಬಂಟ್ವಾಳ: ದ.ಕ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕ ಸಂಘ ಬಂಟ್ವಾಳ ತಾಲೂಕು ಘಟಕ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿರುವ ಶಾಂತರಾಮ್ ಪೈ ಸ್ಮಾರಕ ಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ಕೊರೋನಾ ವೈರಸ್ ತಡೆಗಟ್ಟುವ ಬಗ್ಗೆ ಮಾಹಿತಿ ಅಭಿಯಾನದ ಅಂಗವಾಗಿ ಆರೋಗ್ಯ ಕಿಟ್ ವಿತರಣಾ ಕಾರ‍್ಯಕ್ರಮ ನಡೆಯಿತು. 
ದ.ಕ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕ ಸಂಘದ ಪ್ರಧಾನ ಕಾರ‍್ಯದರ್ಶಿ ಎಂ.ಕರುಣಾಕರ್ ಮಾರಿಪಳ್ಳ ಅವರು ಅಧ್ಯಕ್ಷತೆ ವಹಿಸಿದ್ದರು. ಅಭಿಯಾನ ಕಾರ‍್ಯಕ್ರಮವನ್ನು ಕಾರ್ಮಿಕ ಇಲಾಖೆ ಮಂಗಳೂರು ೧ ನೇ ವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ ಎಲಿಜಬೆತ್ ಉದ್ಘಾಟಿಸಿ ಮಾತನಾಡಿ, ಕೊರೋನಾ ವೈರಸ್ ಹರಡುವ ಬಗ್ಗೆ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಪರಿಸರದಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ವೃತ್ತ ಕಾರ್ಮಿಕ ನಿರೀಕ್ಷಕರಾದ ಮೆರ್ಲಿನ್ ಗ್ರೆಸೀಯಾ ಡಿಸೋಜಾ ರವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ ಕಛೇರಿ ಕೆಲಸಗಳ ಒತ್ತಡದಿಂದಾಗಿ ಅರ್ಜಿಗಳ ಮಂಜೂರಾತಿ ಕೆಲಸ ವಿಳಂಬವಾಗಿರುವುದಕ್ಕೆ ಕಾರ್ಮಿಕರು ಸಹಕರಿಸುವಂತೆ ಕೋರಿದರು. ಸಂಘದ ಕಾರ‍್ಯದರ್ಶಿಗಳಾದ ಬಿ.ಶೇಖರ್ ಇವರು ಪ್ರಸ್ತಾವಿಕವಾಗಿ ಮಾತನಾಡಿದರು. ಎಐಟಿಯುಸಿ ನಾಯಕರಾದ ಸುರೇಶ್ ಕುಮಾರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಸಹ ಕರ‍್ಯದರ್ಶಿ ಹರ್ಷಿತ್ ಪೂಜಾರಿ, ಉಪಾಧ್ಯಕ್ಷರಾದ ಬಾಲಕೃಷ್ಣ ಮದ್ವ ಉಪಸ್ಥಿತರಿದ್ದರು.ಸಂಘದ ಕಛೇರಿ ಕಾರ‍್ಯದರ್ಶಿ ಕು. ಕೇಶವತಿ ಸ್ವಾಗತಿಸಿ,ಸುರೇಶ್ ಕುಮಾರ್ ವಂದಿಸಿದರು. ಇದೇ ವೇಳೆ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.
