ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟುವಿನಲ್ಲಿ ಅನುಷ್ಠಾನಕ್ಕೆ ಬಂದಿರುವ ಎರಡನೇ ಹಂತದ ಕುಡಿಯುವ ನೀರು ರೇಚಕ ಸ್ಥಾವರಕ್ಕೆ ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಠಾತ್ ಭೇಟಿ ನೀಡಿದ್ದು,ಇಲ್ಲಿರುವ ಹಲವಾರು ಸಮಸ್ಯೆಗಳು ಬೆಳಕಿಗೆ ಬಂದಿದೆ.ಬಂಟ್ವಾಳ ಪುರಸಭಾ ವ್ಯಾಪ್ತಿಯ ಈ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಸೆಪ್ಟಂಬರ್ 2017 ರ ಅವಧಿಯಲ್ಲಿ ಪೂರ್ಣಗೊಂಡು ೧ ವರ್ಷದ ನಿರ್ವಹಣೆಯ ಬಳಿಕ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಬೇಕಾಗಿದ್ದು ಆದರೆ ಇದುವರೆಗೂ ಈ ಯೋಜನೆಯನ್ನು ಮಂಗಳೂರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಸ್ತಾಂತರವಾಗಿರುವುದಿಲ್ಲ.
ಶಾಸಕರು ಜಕ್ರಿಬೆಟ್ಟು ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು ನಿರ್ವಹಣೆಗಳ ಬಗ್ಗೆಯು ಬಂಟ್ವಾಳ ಪುರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಧ್ಯೆ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಗೊಂದಲಗಳಿರುವುದು ಬಯಲಿಗೆ ಬಂತು.ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸಿದರು. ಶ್ರೀಘದಲ್ಲಿಯೇ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ಉಪಸ್ಥಿತಿಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಕುರಿತು ಈ ಸಂದರ್ಭ ನಿರ್ಧರಿಸಲಾಯಿತು.

ಶಾಸಕರ ಭೇಟಿಯ ವೇಳೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ ಚಂದ್ರಶೇಖರ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಸಹಾಯಕ ಅಭಿಯಂತರರಾದ ಶೋಭಾಲಕ್ಷ್ಮಿ, ಪುರಸಭೆಯ ಅಭಿಯಂತರರಾದ ಡೊಮಿನಿಕ್ ಡಿಮೆಲ್ಲೊ, ಶಾಸಕರ ಆಪ್ತಸಹಾಯಕ ದಿನೇಶ್ ಹಾಗೂ ರೇಚಕ ಸ್ಥಾವರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
