ಬಂಟ್ವಾಳ : ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ-ಕಕ್ಯಪದವು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ ತ್ಯಾಜ್ಯ ಮತ್ತು ಕಸದ ರಾಶಿಯನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ.ಜಂಟಿಯಾಗಿ ಸ್ವಚ್ಛತೆಗೊಳಿಸಿದರು.

ಭೂ ಕೈಲಾಸ ಪ್ರತೀತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಮೀಪವಿರುವ ಕೊಡ್ಯಮಲೆ ರಕ್ಷಿತಾರಣ್ಯದ ನಡುವೆ ಹಾದು ಹೋಗಿರುವ ಈ ರಸ್ತೆ ಬದಿ ತ್ಯಾಜ್ಯವನ್ನು ಎಸೆಯಲಾಗಿದ್ದು,ಪರಿಣಾಮ ಪರಿಸರವಿಡಿ ರ್ದುನಾತ ಬೀರುತಿತ್ತು. ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಬಳಸಿದ ವಸ್ತು, ಕೋಳಿ ಮಾಂಸದ ಅಂಗಡಿಯ ತ್ಯಾಜ್ಯ ಕ್ಷೌರದಂಗಡಿ , ಗೃಹ ತ್ಯಾಜ್ಯ, ಮದ್ಯದ ಬಾಟಲಿಗಳು, ದೈವಾರಾಧನೆಗೆ ಉಪಯೋಗಿಸಿದ ವಸ್ತುಗಳಿಂದ ಹಿಡಿದು ಎಲ್ಲಾ ತ್ಯಾಜ್ಯವನ್ನು ತಂದು ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು.
ಇದನ್ನು ಗಮನಿಸಿದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಬಂಟ್ವಾಳ ಅರಣ್ಯಾಧಿಕಾರಿ ಮತ್ತು ಸಿಬಂದಿಗಳು, ಕಾವಳಪಡೂರು ಗ್ರಾ.ಪಂ. ಪಿಡಿಒ ಮತ್ತು ಸಿಬಂದಿಗಳು ಈ ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.
