ಬಂಟ್ವಾಳ: ಕೊರೊನಾ ಸೋಂಕು ದೃಢಪಟ್ಟು ಬಿ.ಸಿ.ರೋಡಿನ ಮೂವರು ವೈದ್ಯರು ಸೇರಿದಂತೆ ಒಂದೇ ಕುಟುಂಬದ ಐವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.ಕಳೆದ ವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ, ಅವರೀಗ ಮನೆಗೆ ಮರಳಿದ್ದು, ಭಯ ಬೇಡ ಎಚ್ಚರವಿರಲಿ ಎಂಬ ಸಂದೇಶ ನೀಡಿದ್ದಾರೆ. ಬಿ.ಸಿ.ರೋಡಿನ ಕೈಕಂಬ ಸಮೀಪದ ಮನೆಯೊಂದರಲ್ಲಿ ಖಾಸಗಿ ಪ್ರಾಕ್ಟೀಸ್ ನಡೆಸುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗಲಿತ್ತು.
ಬಳಿಕ ಅವರ ತಂದೆ, ತಾಯಿ, ಪತ್ನಿ, ಮಗನಿಗೂ ಸೋಂಕು ದೃಢಪಟ್ಟಿತ್ತು. ರೋಗಲಕ್ಷಣವಿಲ್ಲದಿದ್ದರೂ ಸೋಂಕು ದೃಢಪಟ್ಟಿದ್ದ ಕಾರಣ ಅವರೆಲ್ಲರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಯಾವುದೇ ತೊಂದರೆ ಇಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದೇವೆ. ವಯಸ್ಸಾದವರಿಗೂ ಯಾವುದೇ ರೋಗಲಕ್ಷಣ ಇಲ್ಲದಿದ್ದರೆ ಬೇಗನೆ ಗುಣವಾಗುತ್ತದೆ, ಕೊರೊನಾ ಕುರಿತು ಭಯ ಬೇಡ ಆದರೆ ಎಚ್ಚರ ಖಂಡಿತಾ ಇರಬೇಕು ಎಂದವರು ಹೇಳಿದ್ದಾರೆ.
ಮತ್ತೆ 24 ಮಂದಿಗೆ ಕೊರೀನಾ: ಕೊರೊನಾಕ್ಕೆ ಸಂಬಂಧಿಸಿ, ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 24 ಪ್ರಕರಣಗಳು ದೃಢಪಟ್ಟಿವೆ. ಪುದು ಗ್ರಾಮವೊಂದರಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಮಕ್ಕಳು, ವಯಸ್ಸಾದವರು ಸೇರಿದ್ದಾರೆ. ಕುರ್ನಾಡು 1 , ಬಿ.ಮೂಡ ಗ್ರಾಮದಲ್ಲಿ 3, ಕಕ್ಯಪದವಿನ 1, ನರಿಂಗಾಣದ 1, ಪಾಣೆಮಂಗಳೂರಿನ 1 ಪ್ರಕರಣಗಳು ಸೇರಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 1 ವರ್ಷದ ಮಗು ಸೇರಿದೆ.ಗುರುವಾರ ಕೂಡ ಬಂಟ್ವಾಳ ತಾಲೂಕಿನಲ್ಲಿ 24 ಪಾಸಿಟಿವ್ ಪ್ರಕರಣ ದಾಖಲಾಗಿದ್ದು,ಇದರಲ್ಲು ಒಂದು ವರ್ಷದ ಮಗು ಸೇರಿತ್ತು.ಶುಕ್ರವಾರ ಆರೋಗ್ಯ ಇಲಾಖೆ ಪ್ರಕಟಿಸಿದ ವರದಿಯಲ್ಲಿ ಒಂದು ವರ್ಷದ ಮಗು ಸೇರಿದಂತೆ 24 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
