ಮಕ್ಕಳಲ್ಲಿ ಕೃಷಿ ಆಸಕ್ತಿ ಮೂಡಿಸಬೇಕು : ಲ. ಕೆ ಎಸ್ ಉಪಾಧ್ಯಾಯ
ಗುರುಪುರ : ಯುವ ಜನಾಂಗ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸಬೇಕು. ಕೊರೊನಾ ಹಾವಳಿಯಿಂದ ಭೀತಿಗೊಳಗಾದ ಮಂದಿ ಈಗ ಹುಟ್ಟೂರಿಗೆ ಮರಳುತ್ತಿದ್ದು(ವಲಸೆ), ಕೃಷಿಗೆ ಆಸಕ್ತರಾಗಿದ್ದಾರೆ. 10 ವರ್ಷದ ಹಿಂದೆಯೇ ಈ ಬಗ್ಗೆ ಜ್ಞಾನೋದಯವಾಗುತ್ತಿದ್ದರೆ ಹುಲುಸಾಗಿ ಕೃಷಿಯೂ ನಡೆಯುತ್ತಿತ್ತು ಮತ್ತು ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿತ್ತು ಎಂದು ಲಯನ್ಸ್ ಕ್ಲಬ್ ಜಿಲ್ಲೆ 317ಡಿ ಜಿಲ್ಲಾಧ್ಯಕ್ಷ ಕೆ ಎಸ್ ಉಪಾಧ್ಯಾಯ ಹೇಳಿದರು.
ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್(ಜಿಲ್ಲೆ 317ಡಿ, ಪ್ರಾಂತ್ಯ-7, ವಲಯ-2) ಆಶ್ರಯದಲ್ಲಿ `ಅನುಪಯುಕ್ತ ಪ್ರದೇಶವನ್ನು ಕೃಷಿಗಾಗಿ ಪುನರ್ಚೇತನ’ಗೊಳಿಸುವ ಕಾರ್ಯಕ್ರಮದಡಿ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಳೀಯ ಕೃಷಿಕ ಕಾರಮೊಗರುಗುತ್ತು ಕಿಟ್ಟಣ್ಣ ರೈ, ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ವಲಯಾಧ್ಯಕ್ಷ ಚಂದ್ರಹಾಸ ರೈ, ಕೆದುಬರಿ ಗುರುವಪ್ಪ ಪೂಜಾರಿ ಮಾತನಾಡಿ, ಕೃಷಿಗೆ ಹೆಚ್ಚೆಚ್ಚು ಮಹತ್ವ ನೀಡಿದರೆ ಲಾಭವೂ ಇದೆ ಮತ್ತು ಪ್ರತಿಯೊಬ್ಬರೂ ಆರೋಗ್ಯವಂತರಾಗಬಹುದು. ನಗರೀಕರಣಕ್ಕೆ ವಿಮುಖರಾಗಿರುವ ವಿದ್ಯಾವಂತರು ಈಗ ಕೃಷಿಗೆ ಆಸಕ್ತರಾಗಿದ್ದು, ಕೃಷಿಗೆ ಮಹತ್ವ ಹೆಚ್ಚಾಗುತ್ತಿದೆ ಎಂದರು.
ಇದೇ ವೇಳೆ ಗದ್ದೆಯಲ್ಲಿ ಲಯನ್ಸ್ ಪದಾಧಿಕಾರಿಗಳು ಭತ್ತದ ನಾಟಿ ಮಾಡಿದರು. ಲಯನ್ಸ್ ಮೆಟ್ರೋ ಗೋಲ್ಡ್ ಸ್ಥಾಪಕ ಕಾರ್ಯದರ್ಶಿ ರಾಮಚಂದ್ರ ರಾವ್, ಮೆಟ್ರೋ ಗೋಲ್ಡ್ ಉಪಾಧ್ಯಕ್ಷ ಮನೋಜ್ಚಂದ್ರ ಶೆಟ್ಟಿ, ಸ್ಥಳೀಯ ಉದ್ಯಮಿ ಸುಚೇತ್ ಪೂಂಜ, ನಾಟಿ ಕೆಲಸದ ಮಹಿಳೆಯರು, ಗುರುವಪ್ಪರ ಕುಟುಂಬ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಅಧ್ಯಕ್ಷ ಕಾರಮೊಗರುಗುತ್ತು ಜಿ ಕೆ ಹರಿಪ್ರಸಾದ್ ರೈ ಸ್ವಾಗತಿಸಿದರು. ಅಡ್ವಕೇಟ್ ಲಯನ್ ಡಿ ಪದ್ಮನಾಭ ಕುಮಾರ್ ವಂದಿಸಿದರು.




