ಗುರುಪುರ : ಗುರುವಾರ ಸುರಿದ ಧಾರಾಕಾರ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟಿನಲ್ಲಿ(133) ಬೃಹತ್ ಬಂಡೆಯೊಂದು ಮನೆಗೆ ಉರುಳಿದ್ದರೆ, ಪಕ್ಕದ ಮತ್ತೊಂದು ಮನೆಯ ಆವರಣ ಗೋಡೆ ಕುಸಿಯುವ ಭೀತಿ ಉಂಟಾಗಿದೆ.
ಅಮೀನಮ್ಮ ಮತ್ತು ಮುತ್ತಪ್ಪ ಪೂಜಾರಿ ಎಂಬವರ ಮನೆಯ ಮಧ್ಯೆ ಗುಡ್ಡದ ಮೇಲಿಂದ ಬಂಡೆಕಲ್ಲು ಜರಿದು ಬಿದ್ದಿದ್ದು, ಅಮೀನಮ್ಮರ ಮನೆ ಬಿರುಕುಗೊಂಡಿದೆ. ಮನೆಯೊಳಗೆ ಗುಡ್ಡದ ನೀರು ಹರಿದಿದೆ. ಮನೆಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಝೀನತ್ ಎಂಬವರ ಮನೆಯ ಬೃಹತ್ ಆವರಣ ಗೋಡೆ ಕುಸಿಯುವ ಹಂತ ತಲುಪಿದ್ದು, ಇದರಿಂದ ಅಯೂಬ್ ಎಂಬವರ ಮನೆಗೆ ಅಪಾಯ ಎದುರಾಗಿದೆ. ಇಲ್ಲಿ ಸುಮಾರು ಐದಾರು ಮನೆಗಳಿಗೆ ಮಳೆ ಹಾನಿ ಸಂಭವಿಸಿದ್ದು, ಸ್ಥಳಕ್ಕೆ ಗ್ರಾಪಂ ಸದಸ್ಯ ರಾಜೇಶ್ ಸುವರ್ಣ, ಬಿಜೆಪಿ ಮುಖಂಡ ಶ್ರೀಕರ ಶೆಟ್ಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ, ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದೇ ಸೈಟಿನ ಬೇಬಿ ಎಂಬವರ ನಿರ್ಮಾಣಾಧೀನ ಮನೆ ಪಕ್ಕದಲ್ಲಿ ಗುಡ್ಡೆ ಕುಸಿದಿದ್ದು, ಮನೆಗೆ ಅಪಾಯ ಕಾದಿದೆ. ಮೂರು ಘಟನೆಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗಾಳಿ-ಮಳೆಗೆ ಆತಂಕ ಎದುರಿಸುತ್ತಿರುವ ಇಲ್ಲಿನ ಏಳೆಂಟು ಮನೆಯವರನ್ನು ಸುಮಾರು ಎರಡು ತಿಂಗಳವರೆಗೆ ಬೇರೆಡೆಗೆ ಸ್ಥಳಾಂತರಿಸಲು ಉಪ-ತಹಶೀಲ್ದಾರ್‍ರ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಸುವರ್ಣ ಹೇಳಿದರು.
