ಕೈಕಂಬ : ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಬೆಜ್ಜಿಬೆಟ್ಟು ಎಂಬಲ್ಲಿ ಹರಿಯುವ ಪರಂಬೋಕು ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ತೋಡಿನ ನೀರು ವಸತಿ ಪ್ರದೇಶ ಹಾಗೂ ಭತ್ತದ ಗದ್ದೆಗಳಿಗೆನೀರು ಹರಿಯುವ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ತೋಡಿನ ಅಂಚಿನಲ್ಲಿ ನಡೆದಾಡುವ ಪಾದಚಾರಿಗಳಿಗೆ ಬಹಳ ಕಷ್ಟಕರವಾಗಿದ್ದು ಅಪಾಯ ಕಾದಿದೆ.
ವರ್ಷಗಳ ಹಿಂದೆ ಈ ತೋಡು ಸುಮಾರು 15 ಅಡಿ ಆಳವಾಗಿತ್ತು. ಈಗ ಹೂಳು, ಪೊದೆ-ಗಿಡಗಂಟಿಗಳಿಂದ ತೋಡು ತುಂಬಿ ಹೋಗಿದೆ. ಕಳೆದ ವರ್ಷ ತೋಡಿನ ಕೆಲವು ಕಡೆ ಜರಿದು, ಗದ್ದೆ ಪ್ರದೇಶಕ್ಕೆ ನೀರು ಹರಿದು ಕೃಷಿಕರು ನಷ್ಟಅನುಭವಿಸಿದ್ದಾರೆ. ಪಂಚಾಯತ್ ಆಡಳಿತದ ಗಮನಹರಿಸಲಾಗಿದ್ದರೂ, ಮತ್ತೊಂದು ಮಳೆಗಾಲದವರೆಗೆ ಯಾರೂ ತೋಡಿನ ಹೂಳೆತ್ತುವ ಗೋಜಿ ಹೋಗಿಲ್ಲ. ಆದ್ದರಿಂದ ಈ ವರ್ಷವೂ ತೋಡು ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೃಷಿಕರೊಬ್ಬರು ಅತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಈ ಸರ್ಕಾರಿ(ಪರಂಬೋಕು) ತೋಡಿನ ಸಹಿತ ಗುರುಪುರದ ಬಡಕರೆಯಲ್ಲಿರುವ ಮತ್ತೊಂದು ತೋಡಿನ ಹೂಳೆತ್ತಿ, ನದಿ ಭಾಗಕ್ಕೆ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.
