ಕುಂದಾಪುರ: ಬೈಕಿನಲ್ಲಿ ಬಂದ ಡಕಾಯಿತರ ತಂಡ ಜ್ಯುವೆಲ್ಲರಿ ಮಾಲಕರು ಹಾಗೂ ಅವರ ಮಕ್ಕಳು ಹಾಗೂ ಸಹಾಯಕ್ಕೆ ಬಂದ ವ್ಯಕ್ತಿಗೆ ಚೂರಿಯಿಂದ ತಿವಿದು ಚಿನ್ನದೊಂದಿಗೆ ಪರಾರಿಯಾಗಿರುವ ಘಟನೆ ಉಪ್ಪುಂದದ ಹೆದ್ದಾರಿ ಸಮೀಪ ನಿನ್ನೆ ರಾತ್ರಿ ಜರಗಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಕುಂದಾಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರನನು ಬಂಧಿಸಲಾಗಿದೆ.
ದರೋಡೆಕೋರರ ಬಂಧನ:
ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದ ಆಗಂತುಕರನ್ನು ಸೆರೆ ಹಿಡಿಯಲು ಬೈಂದೂರು ಪೊಲಿಸರು ಸೇರಿದಂತೆ ವಿವಿಧೆಡೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿತ್ತು. ಈ ನಾಕಾಬಂದಿ ಮೂಲಕ ಡಕಾಯಿತರ ತಂಡದ ಮೂವರನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ದರೋಡೆಕೋರರ ತಂಡ ಕಾರಿನಲ್ಲಿ ಹೆದ್ದಾರಿಯ ಮೂಲಕ ಸಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೆ ವಿವಿಧೆಡೆ ಈ ಮಾಹಿತಿಯನ್ನು ರವಾನಿಸಿ ಸ್ವತಃ ಬೈಂದೂರು ಪೊಲೀಸರು ಕಾರಿನ ಬೆನ್ನಟ್ಟಿದ್ದಾರೆ. ನಾವುಂದದಲ್ಲಿ ಪೊಲೀಸರನ್ನು ಕಂಡಾಕ್ಷಣ ಪರಾರಿಯಾಗಲು ದರೋಡೆಕೋರರು ಯತ್ನಿಸಿದಾಗ ಪೊಲೀಸರು ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿ ಅದರಲ್ಲಿದ್ದ ಮೂವರನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು ಪೊಲೀಸರು ಆತನ ಪತ್ತೆಗೆ ಬಲೆಬೀಸಿದ್ದಾರೆ. ಬಂಧಿತ ಮೂವರು ದರೋಡೆಕೋರರು ರಿಪ್ಪನ್‌ಪೇಟೆ, ಕಾರ್ಕಳ ಮತ್ತು ಉಡುಪಿಯವರು ಎನ್ನಲಾಗುತ್ತಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ದರೋಡೆ ನಡೆದ ಉಪ್ಪುಂದ ಮತ್ತು ದರೋಡೆಕೋರರು ಸೆರೆಸಿಕ್ಕ ನಾವುಂದದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.
ನಡೆದಿದ್ದು ಇಷ್ಟು:
ಉಪ್ಪುಂದ ಶಾಲೆಬಾಗಿಲು ಸಮೀಪ ಮಹಾಲಸ ಹೆಸರಿನ ಜ್ಯುವೆಲ್ಲರ್ಸ್ ಅಂಗಡಿ ಇಟ್ಟುಕೊಂಡಿರುವ ಗಣೇಶ್ (66) ಮತ್ತು ಅವರ ಮಗ ಸುಧೀಂದ್ರ(28), ಮಗಳು ದಿವ್ಯಶ್ರೀ ಎಂಬವರೊಂದಿಗೆ ಹೆದ್ದಾರಿಯಿಂದ ಗದ್ದೆ ಬೈಲಿನಲ್ಲಿ ಅನತಿ ದೂರದಲ್ಲಿರುವ ತಮ್ಮ ಮನೆಗೆ ಎಂದಿನಂತೆ ಸಾಗುತ್ತಿದ್ದರು. ಹೆದ್ದಾರಿ ಇಳಿದು ಗದ್ದೆ ಬೈಲಿನಲ್ಲಿ ಹೋಗುತ್ತಿದ್ದಾಗ ಹಠಾತ್ತಾಗಿ ಮುಗಿಬಿದ್ದ 4-5 ಜನರ ಗುಂಪು ತಂದೆ ಮಕ್ಕಳ ಮುಖದ ಮೇಲೆ ಮೆಣಸಿನ ಹುಡಿಯನ್ನು ಎರಚಿ, ಚೂರಿಯಿಂದ ತಿವಿದಿದ್ದರು. ಏಕಾಏಕಿ ಜರಗಿದ ಅನಿರೀಕ್ಷಿತ ಘಟನೆಯಿಂದ ತಂದೆ ಮಕ್ಕಳು ಬೊಬ್ಬಿರಿದಿದ್ದರು. ಇವರ ಬೊಬ್ಬೆ ಕೇಳಿ ನೆರೆಮನೆಯ ಸುನಿಲ್ ಶೇಟ್ ಎಂಬವರೂ ಸಹ ಇವರ ಸಹಾಯಕ್ಕೆ ಧಾವಿಸಿದ್ದರು.
ಅವರನ್ನೂ ಬಿಡದ ಅಪರಿಚಿತ ಡಕಾಯಿತರು ಅವರ ಹೊಟ್ಟೆಗೂ ಬಲವಾಗಿ ಚೂರಿಯಿಂದ ಇರಿದಿದ್ದರು. ಅಷ್ಟರಲ್ಲಿ ಗಣೇಶ್ ಶೇಟ್ ನ ಕೈಯಲ್ಲಿದ್ದ ಸುಮಾರು 1 ಕೆ.ಜಿ ಗೂ ಮಿಕ್ಕಿದ ಚಿನ್ನದ ಚೀಲವನ್ನು ತೆಗೆದುಕೊಂಡ ಡಕಾಯಿತರು ಹೆದ್ದಾರಿ ಮೂಲಕ ಕಣ್ಮರೆಯಾಗಿದ್ದರು. ಇವರ ಜಟಾಪಟಿ ನಡೆಯುತ್ತಿದ್ದಾಗಲೇ ಅವಕಾಶವನ್ನು ಬಳಸಿಕೊಂಡ ದಿವ್ಯಶ್ರೀ ಓಡೋಡಿ ಮನೆಗೆ ಬಂದು ಜರಗಿದ ವಿಷಯವನ್ನು ಹೇಳಿದಾಗ ಅಷ್ಟರಲ್ಲಾಗಲೇ ಡಕಾಯಿತರು ತಮ್ಮ ಕೆಲಸ ಮುಗಿಸಿ ಪರಾರಿಯಾಗಿದ್ದರು. ಕೂಡಲೇ ವಿಷಯ ತಿಳಿದ ಬೈಂದೂರು, ಗಂಗೊಳ್ಳಿ ಪೊಲೀಸರು ಜಂಟಿಯಾಗಿ ಹೆದ್ದಾರಿ ನಾಕಾಬಂದಿ ನಡೆಸಿದ್ದರು. ಈ ನಡುವೆ ದರೋಡೆ ಕೋರರು ಸಿಕ್ಕಿಬಿದ್ದಿದ್ದಾರೆ ಎಂಬ ಗಾಳಿ ಸುದ್ಧಿ ಹಬ್ಬಿದ್ದರೂ ಪೊಲೀಸರು ಅದನ್ನು ದೃಢಪಡಿಸಿಲ್ಲ. ದಿನಾಲೂ ಅಂಗಡಿ ಮುಚ್ಚಿದ ಮೇಲೆ ಮನೆಗೆ ಚಿನ್ನವನ್ನು ಕೊಂಡೊಯ್ಯುತ್ತಿದ್ದ ಗಣೇಶ್ ಶೇಟ್ ಅವರ ಚಟುವಟಿಕೆಗಳ ಮೇಲೆ ಕಣ್ಣಿರಿಸಿ ದವರೇ ಕೃತ್ಯ ನಡೆಸಿದ್ದಾರೆಂದು ಹೇಳಲಾಗುತ್ತಿದ್ದರೂ, ಗಣೇಶ್ ಶೇಟ್ ಅವರ ಅಭಿಪ್ರಾಯದಂತೆ ಡಕಾಯಿತರು ಮಲಯಾಳಂ ಭಾಷೆ ಮಾತನಾಡುತ್ತಿದ್ದರೆಂದು ತಿಳಿಸಿದ್ದಾರೆ.
ಗಣೇಶ್ ಹಾಗೂ ಸುನಿಲ್ ಶೇಟ್
ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತೀವ್ರವಾಗಿ ಗಾಯಗೊಂಡ ಸುಧೀಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.



